ಭಾರತ ಮತ್ತು ಅಮೆರಿಕ ನಡುವಿನ ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ಜಾರ್ಜ್ ಡಬ್ಲ್ಯು ಬುಷ್ ಅವರು ಶ್ವೇತಭವನದಲ್ಲಿ ಬುಧವಾರ ಅಕ್ಟೋಬರ್ 8ರಂದು ನಡೆಯುವ ಸಮಾರಂಭದಲ್ಲಿ ಮಸೂದೆಗೆ ಅಂಕಿತ ಹಾಕಲಿದ್ದಾರೆ.
ಅ.8ರ ಐತಿಹಾಸಿಕ ಗಳಿಗೆಯಲ್ಲಿ ಉಪಸ್ಥಿತರಿರುವಂತೆ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಅನುಮೋದನೆ ಗಳಿಸುವಲ್ಲಿ ಮುಖ್ಯ ಪಾತ್ರವಹಿಸಿದ ಭಾರತೀಯ ಸಂಜಾತ ಅಮೆರಿಕನ್ ಆಯ್ದ ನಾಯಕರಿಗೆ ಶ್ವೇತಭವನದಿಂದ ಆಹ್ವಾನ ನೀಡಲಾಗಿದೆ.
ಅಮೆರಿಕ-ಭಾರತ ಪರಮಾಣು ಸಹಕಾರ ಒಪ್ಪಂದಕ್ಕೆ ಮತ್ತು ಪ್ರಸರಣನಿಷೇಧ ವೃದ್ಧಿ ಕಾಯ್ದೆಗೆ ಸಹಿಹಾಕುವುದರಿಂದ ಪರಮಾಣು ಒಪ್ಪಂದದ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ 2005ರ ಜು.18ರಂದು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದಾಗ ಬುಷ್ ಜತೆಗೂಡಿ ಜಂಟಿಹೇಳಿಕೆ ನೀಡುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.
ಅಮೆರಿಕ ಕಾಂಗ್ರೆಸ್‌ನಲ್ಲಿ ಮಸೂದೆ ಅನುಮೋದನೆ ಗಳಿಸಿದ ಒಂದು ವಾರದಲ್ಲೇ ಮಸೂದೆಗೆ ಸಹಿ ಬೀಳಲಿದೆ. ಅನೇಕ ಭಾರತೀಯ ಸಂಜಾತ ಅಮೆರಿಕನ್ನರು ಮತ್ತು ಬುಷ್ ಆಡಳಿತದ ಹಿರಿಯ ಅಧಿಕಾರಿಗಳು ಮತ್ತು ಕೆಲವು ಅಮೆರಿಕ ಕಾಂಗ್ರೆಸ್ ಸದಸ್ಯರು ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. |