ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರಗಾಮಿಗಳನ್ನು "ಭಯೋತ್ಪಾದಕರು" ಎಂದು ಬಣ್ಣಿಸಿದ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿಕೆಗೆ ಪಾಕಿಸ್ತಾನ ಮುಸ್ಲಿಂ ಲೀಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಭಾರತವೀಗ ಪಾಕಿಸ್ತಾನಕ್ಕೆ 'ಬೆದರಿಕೆ'ಯಾಗಿ ಉಳಿದಿಲ್ಲ ಎಂದು ಒಪ್ಪಿಕೊಂಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರಗಾಮಿಗಳನ್ನು "ಭಯೋತ್ಪಾದಕರು" ಎಂದು ಬಣ್ಣಿಸಿದ್ದರು.
ಆಗಸ್ಟ್ ತಿಂಗಳವರೆಗೂ ಜರ್ದಾರಿ ನೇತೃತ್ವದ ಪಿಪಿಪಿ ನೇತೃತ್ವದ ಸರಕಾರದಲ್ಲಿದ್ದ ಮಾಜಿ ಪ್ರಧಾನಿ ನವಾಜ್ ಶರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್), ಆ ಬಳಿಕ ಆಂತರಿಕ ವೈಮನಸ್ಯದಿಂದಾಗಿ ಸರಕಾರದಿಂದ ಹೊರಬಂದಿತ್ತು.
ಪಾಕಿಸ್ತಾನದ ಉನ್ನತ ಮಟ್ಟದ ನಾಯಕರೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲ ಬಾರಿ. "ಭಾರತವು ಪಾಕಿಸ್ತಾನಕ್ಕೆ ಬೆದರಿಕೆ ಅಲ್ಲ. ನಮ್ಮ ಪ್ರಜಾಪ್ರಭುತ್ವ ಸರಕಾರವು ವಿಶ್ವಾದ್ಯಂತ ಭಾರತ ಹೊಂದಿರುವ ಪ್ರಭಾವದಿಂದ ವಿಚಲಿತವಾಗಿಲ್ಲ" ಎಂದು ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿರುವ ಸಂದರ್ಶನದಲ್ಲಿ ಜರ್ದಾರಿ ತಿಳಿಸಿದ್ದರು.
ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಸಂಘಟನೆಗಳನ್ನು "ಭಯೋತ್ಪಾದಕರು" ಎಂದು ಜರ್ದಾರಿ ಬಣ್ಣಿಸಿರುವುದು ಕುತೂಹಲ ಕೆರಳಿಸಿದೆ. ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಇದೇ ಉಗ್ರಗಾಮಿಗಳನ್ನು "ಸ್ವಾತಂತ್ರ್ಯ ಹೋರಾಟಗಾರರು' ಎಂದು ಬಣ್ಣಿಸಿರುವುದು ಇಲ್ಲಿ ಉಲ್ಲೇಖಾರ್ಹ. |