ಶ್ರೀಲಂಕಾ ಬೌದ್ಧರ ನಗರವಾಗಿರುವ ಅನುರಾಧಪುರದಲ್ಲಿ ಶಂಕಿತ ಎಲ್‌ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿಯಿಂದಾಗಿ, ಶ್ರೀಲಂಕಾ ಉತ್ತರ ಕೇಂದ್ರ ಪ್ರಾಂತೀಯ ಸಮಿತಿಯ ವಿರೋಧ ಪಕ್ಷದ ನಾಯಕ ಮಾಜ್ ಜನರಲ್ ಜನಕ ಪರೇರಾ ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದು, ಸುಮಾರು 35 ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಸೇನೆಯನ್ನು ನಿರ್ವಹಿಸುತ್ತಿರುವ ವೇಳೆ ಎಲ್‌ಟಿಟಿಇ ವಿರುದ್ಧ ಅನೇಕ ಕಾರ್ಯಾಚರಣೆಗಳನ್ನು ನಡೆಸಿದ್ದ ಪರೇರಾ ಅವರನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗಿರುವುದಾಗಿ ಶಂಕಿಸಲಾಗಿದೆ.
ಅನುರಾಧಪುರ ಬಸ್ ನಿಲ್ದಾಣ ಬಳಿಯಿರುವ ಯುನೈಟೆಡ್ ನ್ಯಾಶನಲ್ ಪಾರ್ಟಿಯ ಕಚೇರಿ ಸಮೀಪ ಉಂಟಾದ ಈ ಬಾಂಬ್ ಸ್ಫೋಟದಲ್ಲಿ ಪರೇರಾ ಅವರ ಪತ್ನಿ ಮತ್ತು ಯುನೈಟೆಡ್ ನ್ಯಾಶನಲ್ ಪಾರ್ಟಿಯ ಕೆಲವು ಸದಸ್ಯರೂ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಯುಎನ್‌ಪಿಯ ಅನುರಾಧಪುರದ ನಿರ್ವಾಹಕ ಡಾ.ಜಾನ್ ಪುಲ್ಲೆ ಮತ್ತು ಅವರ ಪತ್ನಿಯೂ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅನುರಾಧಪುರದಲ್ಲಿ ಯುಎನ್‌ಪಿಯ ನೂತನ ಕಚೇರಿ ಪ್ರಾರಂಭಕ್ಕಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಂಜಾನೆ 8.45ರ ವೇಳೆಗೆ ಬಾಂಬ್ ಸ್ಫೋಟಗೊಂಡಿತು ಎಂದು ಮೂಲಗಳು ಹೇಳಿವೆ. |