ಏಡ್ಸ್ ಮತ್ತು ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗುವ ವೈರಸ್ ಮೇಲೆ ನಡೆಸಿದ ಸಂಶೋಧನೆಗಳಿಗಾಗಿ ಯೂರೋಪ್‌ನ ಮೂವರು ವಿಜ್ಞಾನಿಗಳು 2008ರ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಫ್ರೆಂಚ್ ಸಂಶೋಧಕರಾದ ಫ್ರಾಂಕೊಯಿಸ್ ಬಾರಿ-ಸಿನೌಸಿ ಮತ್ತು ಲೂಕ್ ಮೊಂಟಾಗ್ನಿಯರ್ ಅವರು ಎಚ್ಐವಿ (ಹ್ಯೂಮನ್ ಇಮ್ಯುನೋಡೆಫಿಶಿಯನ್ಸಿ ವೈರಸ್) ಸಂಶೋಧಿಸಿ ಸಾಧನೆ ಮೆರೆದಿದ್ದರೆ, 72 ಹರೆಯದ, ಜರ್ಮನಿಯ ಹರಾಲ್ಡ್ ಜುರ್ ಹ್ಯೂಸೆನ್ ಅವರು ಗರ್ಭಾಶಯ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್ ಪೆಪಿಲೋಮಾ ವೈರಸ್ ಸಂಶೋಧಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜರ್ಮನ್ ವೈದ್ಯಕೀಯ ತಜ್ಞ ಪ್ರಶಸ್ತಿ ಹಣದ ಅರ್ಧ ಭಾಗ (14 ಲಕ್ಷ ಡಾಲರ್) ತಮ್ಮದಾಗಿಸಿಕೊಂಡಿದ್ದರೆ, ಇಬ್ಬರು ಫ್ರೆಂಚ್ ವಿಜ್ಞಾನಿಗಳು ಉಳಿದರ್ಧ ಹಣವನ್ನು ಹಂಚಿಕೊಂಡಿದ್ದಾರೆ.
ಬಾರಿ-ಸಿನೌಸಿ ಮತ್ತು ಮಾಂಟೆಗ್ನಿಯರ್ ಸಂಶೋಧನೆಯು ಏಡ್ಸ್‌ನ ಜೀವಶಾಸ್ತ್ರೀಯ ವಿಧಾನ, ಅದರ ಚಿಕಿತ್ಸೆ ಮತ್ತು ವೈರಸ್-ನಿರೋಧಕ ಔಷಧಗಳ ಕುರಿತು ಅರಿತುಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. 1980ರ ಆದಿಭಾಗದಲ್ಲಿ ಈ ಜೋಡಿ ಕೈಗೊಂಡ ಸಂಶೋಧನೆಯು ವೈರಸ್ಸನ್ನು ಅತ್ಯಂತ ಕೂಲಂಕಷವಾಗಿ ಅಧ್ಯಯನ ನಡೆಸಲು ಪೂರಕವಾಯಿತು ಮತ್ತು ಎಚ್ಐವಿ ಹೇಗೆ ಹರಡುತ್ತದೆ ಎಂಬುದನ್ನು ಅರಿಯಲು ವಿಜ್ಞಾನಿಗಳಿಗೆ ನೆರವಾಯಿತು ಮಾತ್ರವಲ್ಲ, ಎಚ್ಐವಿ-ನಿರೋಧಕ ಔಷಧಿಗಳ ಸಂಶೋಧನೆಗೂ ವೇದಿಕೆ ಒದಗಿಸಿತು ಎಂದು ನೊಬೆಲ್ ಅಸೆಂಬ್ಲಿ ತಿಳಿಸಿದೆ.
ಜುರ್ ಹ್ಯೂಸೆನ್ ಅವರು, ಗರ್ಭಾಶಯ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಹ್ಯೂಮನ್ ಪೆಪಿಲೋಮಾ ವೈರಸ್ (ಎಚ್‌ಪಿವಿ) ಪತ್ತೆ ಹಚ್ಚಿ, ಹಲವು ಎಚ್‌ಪಿವಿ ವಿಧಗಳಿದ್ದು, ಅವುಗಳಲ್ಲಿ ಕೆಲವು ಮಾತ್ರ ಕ್ಯಾನ್ಸರ್ ಉಂಟುಮಾಡಬಲ್ಲವು ಎಂಬುದನ್ನು ಸಂಶೋಧಿಸಿ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇದು ರೋಗ ನಿರೋಧಕ ಔಷಧಿ ಕಂಡುಹಿಡಿಯಲು ನೆರವಾಯಿತು ಎಂದು ನೋಬೆಲ್ ಅಸೆಂಬ್ಲಿ ತಿಳಿಸಿದೆ. |