ಅಮೆರಿಕ ಶೇರುಮಾರುಕಟ್ಟೆ ಕುಸಿತದ ಪರಿಣಾಮವಾಗಿ ಆರ್ಥಿಕವಾಗಿ ಹೊಡೆತಕ್ಕೊಳಗಾದ , ಲಾಸ್ ಏಂಜಲ್ಸ್‌ನ ಭಾರತೀಯ ಮೂಲದ ಉದ್ಯಮಿಯೊಬ್ಬರು ಕುಟುಂಬ ಸಮೇತ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಬೀಭತ್ಸ ಘಟನೆ ನಡೆದಿದೆ.
ಲಂಡನ್ ಮೂಲದ ಲಾಭ ನಿಧಿಯಲ್ಲಿ 1.2 ದಶಲಕ್ಷಕ್ಕೂ ಹೆಚ್ಚು ಲಾಭ ಪಡೆದುಕೊಂಡಿದ್ದ 45 ವರ್ಷದ ಕಾರ್ತಿಕ್ ರಾಜಾರಾಂ, ದಿಢೀರನೆ ಬಂದೊಗಿದೆ ನಷ್ಟದ ಆಘಾತವನ್ನು ಭರಿಸಲಾಗದೆ ತನ್ನ ಪತ್ನಿ ಶುಭಾಶ್ರೀ (39), ಅತ್ತೆ (70), ಮಕ್ಕಳಾದ ಕೃಷ್ಣ (19), ಗಣೇಶ (12) ಮತ್ತು ಅರ್ಜುನ (7) ಅವರನ್ನು ಗುಂಡಿಕ್ಕಿ ಕೊಂದ ಬಳಿಕ, ಸ್ವತಃ ತನ್ನನ್ನು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಮಾರುಕಟ್ಟೆಯಲ್ಲಿನ ಗಣನೀಯ ಕುಸಿತದಿಂದಾಗಿ ಎಂಬಿಎ ಪದವೀಧರರಾಗಿರುವ ರಾಜಾರಾಂ, ಮೊದಲಿಗೆ ತನ್ನ ಕುಟುಂಬದವರ ಮೇಲೆ ಗುಂಡುಹಾರಿಸಿ ನಂತರ ತನಗೇ ಗುಂಡುಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪ್ರಾಧಿಕಾರವು ಶಂಕಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಹಣಕಾಸು ಬಿಕ್ಕಟ್ಟಿನಿಂದಾಗಿ, ರಾಜಾರಾಂ ಕಳೆದ ಕೆಲವು ವಾರಗಳಲ್ಲಿ ತೊಡಕಿಗೆ ಸಿಕ್ಕಿಹಾಕಿಕೊಂಡಿರುವು ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಾರಾಂ, ಸೆಪ್ಟೆಂಬರ್ 16ರಂದು ಬಂದೂಕು ಖರೀದಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದರು. ನಂತರ, ಶನಿವಾರ ರಾತ್ರಿ ತನ್ನ ಪತ್ನಿ, ಅತ್ತೆ ಹಾಗೂ ಮೂವರು ಪುತ್ರರನ್ನು ಕೊಂದು ಕೊನೆಗೇ ತಾನೂ ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ. |