ಜೆಲ್ಲಿಫಿಶ್‌ನಲ್ಲಿ (ಲೋಳೆಮೀನು) ಕಂಡುಬರುವ ಹೊಳೆಯುವ ಹಸಿರು ಪ್ರೊಟೀನನ್ನು ಜೀವಕೋಶಗಳು ಮತ್ತು ಜೀವಿಗಳ ಅತ್ಯಂತ ಸೂಕ್ಷ್ಮ ವಿವರಗಳನ್ನು ನೋಡಲು ಸಾಧ್ಯವಾಗುವಂತೆ ಪರಿವರ್ತಿಸಿದ ಮೂವರು ವಿಜ್ಞಾನಿಗಳಿಗೆ ರಸಾಯನ ಶಾಸ್ತ್ರ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ.
ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನೀ ವಿಜ್ಞಾನಿ ಒಸಾಮು ಶಿಮೊಮುರಾ ಹಾಗೂ ಇಬ್ಬರು ಅಮೆರಿಕನ್ನರಾದ ಮಾರ್ಟಿನ್ ಚಾಲ್ಫೀ ಹಾಗೂ ರೋಜರ್ ತ್ಸಿಯೆನ್ ಅವರು ಈ ಹಸಿರು ಹೊಳಪಿನ ಪ್ರೊಟೀನ್ (ಗ್ರೀನ್ ಫ್ಲೂರೊಸೆಂಟ್ ಪ್ರೊಟೀನ್-ಜಿಎಫ್‌ಪಿ) ಕುರಿತ ಆವಿಷ್ಕಾರಕ್ಕಾಗಿ ರಸಾಯನ ಶಾಸ್ತ್ರ ನೊಬೆಲ್ ಗೆದ್ದುಕೊಂಡಿದ್ದಾರೆ.
ನೆರಳಾತೀತ ಬೆಳಕಿಗೆ ಈ ಪ್ರೊಟೀನನ್ನು ಒಡ್ಡಿದಾಗ ಅದು ಹಸಿರು ಬಣ್ಣದಿಂದ ಹೊಳೆಯುತ್ತದೆ. ಜೀವಕೋಶದೊಳಗೆ ಕೆಲಸ ಮಾಡುವ, ಕಣ್ಣಿಗೆ ಕಾಣಿಸದ ಪ್ರೊಟೀನ್‌ಗಳು ಹೇಗೆ ಮತ್ತು ಯಾವ ರೀತಿ ಚಲಿಸುತ್ತವೆ ಎಂಬುದನ್ನು ತಿಳಿಯಲು ಇದನ್ನು ಮಾರ್ಕರ್‌ನಂತೆಯೂ ಬಳಸಬಹುದಾಗಿದೆ. ಅಂಗಾಂಶದಲ್ಲಿರುವ ನಿರ್ದಿಷ್ಟ ಕೋಶಗಳನ್ನು ಅದು ಪ್ರತ್ಯೇಕವಾಗಿ ಗುರುತಿಸುವಂತೆ ಮಾಡಬಲ್ಲುದು. ಮಾತ್ರವಲ್ಲದೆ, ನಿರ್ದಿಷ್ಟ ವಂಶವಾಹಿಯೊಂದು ಯಾವಾಗ ಮತ್ತು ಎಲ್ಲಿ ಸಕ್ರಿಯವಾಗುತ್ತದೆ ಹಾಗೂ ನಿಷ್ಕ್ರಿಯವಾಗುತ್ತದೆ ಎಂಬುದನ್ನೂ ಈ ಪ್ರೋಟೀನ್ ತೋರಿಸಬಲ್ಲುದಾಗಿದೆ.
ಮೆದುಳಿನ ಜೀವಕೋಶಗಳ ಬೆಳವಣಿಗೆ, ಗಡ್ಡೆಗಳ ಬೆಳವಣಿಗೆ ಮತ್ತು ಕ್ಯಾನ್ಸರ್ ಕೋಶಗಳ ವಿಸ್ತರಣೆ ಮುಂತಾದವುಗಳನ್ನು ಪತ್ತೆ ಹಚ್ಚುವುದಕ್ಕೆ ವಿಶ್ವಾದ್ಯಂತ ವಿಜ್ಞಾನಿಗಳು ಈ ಜಿಎಫ್‌ಪಿಯನ್ನು ಬಳಸುತ್ತಿದ್ದಾರೆ. ಅಲ್ಜೈಮರ್ ರೋಗದಿಂದ ಉಂಟಾಗುವ ನರ ಕೋಶಗಳ ಅಧ್ಯಯನಕ್ಕೂ ಈ ಪ್ರೊಟೀನ್ ಅವಕಾಶ ಮಾಡಿಕೊಟ್ಟಿದ್ದು, ಮಾತ್ರವಲ್ಲದೆ, ಬೆಳೆಯುತ್ತಿರುವ ಭ್ರೂಣವೊಂದರಲ್ಲಿ, ಇನ್ಸುಲಿನ್ ಉತ್ಪತ್ತಿ ಮಾಡಬಲ್ಲ ಬೀಟಾ ಕೋಶಗಳು ಮೇದೋಜೀರಕಾಂಗದಲ್ಲಿ ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದನ್ನೂ ತಿಳಿಯಲು ಸಾಧ್ಯವಾಗಿಸಿದೆ.
ಈ ಪುರಸ್ಕಾರ ಘೋಷಿಸಿರುವ ರಾಯಲ್ ಸ್ವೀಡಿಶ್ ಅಕಾಡೆಮಿಯು ತನ್ನ ಹೇಳಿಕೆಯಲ್ಲಿ, ಜಿಎಫ್‌ಪಿಯ ಪರಿಣಾಮವನ್ನು ಸೂಕ್ಷ್ಮದರ್ಶಕ ಯಂತ್ರದ ಆವಿಷ್ಕಾರಕ್ಕೆ ಹೋಲಿಸಿದ್ದು, ಕಳೆದ ಒಂದು ದಶಕದಿಂದ ಈ ಸಂಶೋಧನೆಯು ವಿಜ್ಞಾನಿಗಳಿಗೆ "ಮಾರ್ಗದರ್ಶಕ ತಾರೆ"ಯಂತೆ ಕೆಲಸ ಮಾಡಿದೆ ಎಂದು ಹೇಳಿದೆ. |