ಬಹುನಿರೀಕ್ಷಿತ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶುಕ್ರವಾರ (ಭಾರತೀಯ ಕಾಲಮಾನ ಪ್ರಕಾರ ಶನಿವಾರ) ಸಹಿ ಹಾಕಲಿದೆ ಎಂದು ಅಮೆರಿಕದ ರಾಜ್ಯಾಂಗ ಇಲಾಖೆ ಪ್ರಕಟಿಸಿದೆ.
ಬುಧವಾರ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರು ಈ ಒಪ್ಪಂದಕ್ಕೆ ಶಾಸನ ರೂಪ ನೀಡುವ ವಿಧೇಯಕಕ್ಕೆ ಅಂತಿಮ ಮುದ್ರೆ ಹಾಕಿದ್ದು, ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹಾಗೂ ಅಮೆರಿಕ ರಾಜ್ಯಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್ ಅವರು ತಮ್ಮ ತಮ್ಮ ದೇಶಗಳ ಪರವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಶುಕ್ರವಾರ ಸಂಜೆ 4 ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ, ಶನಿವಾರ ನಸುಕು ಹರಿಯುವ ಮುನ್ನ 1.30ಕ್ಕೆ) ರೈಸ್ ಮತ್ತು ಪ್ರಣಬ್ ಅವರು ಭಾರತೀಯ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ರಾಜ್ಯಾಂಗ ಇಲಾಖೆ ವಕ್ತಾರ ಸೀನ್ ಮೆಕ್‌ಕರ್ಮಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ, ಪರಮಾಣು ಒಪ್ಪಂದವನ್ನು ಶಾಸನವಾಗಿಸುವ ವಿಧೇಯಕಕ್ಕೆ ಅಧ್ಯಕ್ಷ ಬುಷ್ ಶ್ವೇತಭವನದಲ್ಲಿ ಸಹಿ ಹಾಕಿದರು. ಬುಷ್ ಮತ್ತು ಮನಮೋಹನ್ ಸಿಂಗ್ ಅವರು ಜುಲೈ 18ರಂದು ಈ ಒಪ್ಪಂದಕ್ಕೆ ಜಂಟಿ ಅನುಮೋದನೆ ನೀಡಿದ್ದರು. |