ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿನ ಪೊಲೀಸ್ ಕೇಂದ್ರ ಕಚೇರಿ ಹಾಗೂ ಶಾಲಾ ವಾಹನದ ಮೇಲೆ ಗುರುವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ನಾಲ್ಕು ಪೊಲೀಸ್, ನಾಲ್ಕು ಮಕ್ಕಳು ಸೇರಿದಂತೆ ಸುಮಾರು 16ಮಂದಿ ಬಲಿಯಾಗಿದ್ದು,ಹಲವಾರು ಮಂದಿ ಗಾಯಗೊಂಡಿದ್ದಾರೆ.
ಪೊಲೀಸ್ ವ್ಯಾನ್ ಕೈದಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಅನ್ನು ಸ್ಫೋಟಿಸುವ ಮೂಲಕ ಈ ದುರಂತ ಸಂಭವಿಸಿದೆ. ಈ ಸಂದರ್ಭದಲ್ಲಿಯೇ ಶಾಲಾ ವಾಹನ ಕೂಡ ಸ್ಫೋಟಕ್ಕೆ ಸಿಲುಕಿ ಮಕ್ಕಳು ಅಸುನೀಗಿರುವುದಾಗಿ ಪಿಟಿವಿ ವರದಿ ತಿಳಿಸಿದೆ.
ಪೊಲೀಸ್ ತರಬೇತಿ, ವಸತಿ ಹೊಂದಿದ್ದ ಪೊಲೀಸ್ ಕೇಂದ್ರ ಕಚೇರಿಯನ್ನು ಮುಖ್ಯ ಗುರಿಯನ್ನಾಗಿ ಇಟ್ಟುಕೊಂಡು ಈ ದುಷ್ಕೃತ್ಯ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಕೇಂದ್ರ ಕಚೇರಿಯಲ್ಲಿ ಸಾವಿರ ಮಂದಿ ಇದ್ದಿದ್ದರು.
ಸ್ಫೋಟದಲ್ಲಿ ನಾಲ್ಕು ಶಾಲಾ ಮಕ್ಕಳು, ಹಲವು ಕೈದಿಗಳು , ಪೊಲೀಸರು ಸೇರಿದಂತೆ ಒಟ್ಟು 16 ಮಂದಿ ಬಲಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದಾಳಿಯ ಬಗ್ಗೆ ಈವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗಷ್ಟೇ ಪಾಕ್‌ನ ಪ್ರಸಿದ್ಧ ಮ್ಯಾರಿಯಟ್ ಹೋಟೆಲ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 54ಮಂದಿ ಬಲಿಯಾದ ಘಟನೆ ನಡೆದ ಬೆನ್ನಲ್ಲೇ ಮತ್ತೆ ಇಸ್ಲಾಮಾಬಾದ್‌ನಲ್ಲಿ ಆತ್ಮಹತ್ಯಾ ದಾಳಿ ನಡೆದಿದೆ. |