ಶಂಕಿತ ಎಲ್‌ಟಿಟಿಇ ಬಂಡುಕೋರರು ಗುರುವಾರ ನಡೆಸಿದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಶ್ರೀಲಂಕಾದ ಸಚಿವರೊಬ್ಬರು ಹತ್ಯಾ ಸಂಚಿನಿಂದ ಪಾರಾಗಿದ್ದು, ಅವರ ಅಂಗರಕ್ಷಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಲೊಂಬೋದಿಂದ ಹತ್ತು ಕಿ.ಮೀ. ದೂರದಲ್ಲಿರುವ ಬೋರಾಲ್ಸ್‌ಗಾಮುವಾ ಟ್ರಾಫಿಕ್ ಜಂಕ್ಷನ್‌ನಲ್ಲಿ ಕೃಷಿ ಅಭಿವೃದ್ಧಿ ಸಚಿವ ಮೈತ್ರಿಪಾಲಾ ಸಿರಿಸೇನಾ ಅವರನ್ನು ಗುರಿಯಾಗಿಟ್ಟು ಕೊಂಡು ಆತ್ಮಹತ್ಯಾ ಬಾಂಬ್‌ರ್ ನಡೆಸಿದ ದಾಳಿಯಲ್ಲಿ ಅವರು ಪವಾಡಸದೃಶವಾಗಿ ಪಾರಾಗಿರುವುದಾಗಿ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಉದಯ ನಾನಾಯಕ್ಕಾರಾ ಅವರು ತಿಳಿಸಿದ್ದಾರೆ.
ಅದೃಷ್ಟವಶಾತ್ ಸಚಿವರು ಯಾವುದೇ ಅಪಾಯವಿಲ್ಲದೆ ಸ್ಫೋಟದಿಂದ ಪಾರಾಗಿದ್ದು, ಅವರ ರಕ್ಷಣಾ ಪಡೆಯ ವಾಹನದಲ್ಲಿದ್ದ ಅಂಗರಕ್ಷಕನೊಬ್ಬ ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿರುವುದಾಗಿ ಅವರು ಹೇಳಿದರು.
ಸಚಿವ ಸಿರಿಸೇನಾ ಅವರು ಆಡಳಿತರೂಢ ಶ್ರೀಲಂಕಾದ, ಶ್ರೀಲಂಕಾ ಪ್ರೀಡಂ ಪಕ್ಷದ(ಎಸ್‌ಎಲ್‍ಎಫ್‌ಪಿ)ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪ್ಯಾಲೇಸ್ತೇನಿ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರು ಕೊಲೊಂಬೋಕ್ಕೆ ಆಗಮಿಸುವ ಒಂದು ಗಂಟೆಯ ಮುನ್ನ ಈ ಸ್ಫೋಟ ಸಂಭಸಿಸಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
|