ರಾಷ್ಟ್ರೀಯ ಭದ್ರತೆಗೆ ಅಗತ್ಯವಾದ ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಬಗ್ಗೆ ಪಾಕಿಸ್ತಾನವು ಯಾವುದೇ ರೀತಿಯ ಸಂಧಾನ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನವು 'ಜವಾಬ್ದಾರಿಯುತ ಪರಮಾಣು ರಾಷ್ಟ್ರ' ಎಂಬುದಾಗಿ ಉಲ್ಲೇಖಿಸಿದ ಜರ್ದಾರಿ, ದೇಶದ ಪರಮಾಣು ಶಸ್ತ್ರಾಸ್ತ್ರವು ಭಯೋತ್ಪಾದಕರ ಕೈಸೇರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ದೇಶದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಬಗ್ಗೆ ಪಾಕಿಸ್ತಾನವು ಯಾವುದೇ ಸಂಧಾನ ಮಾಡುವುದಿಲ್ಲ ಯಾಕೆಂದರೆ, ದೇಶದ ಭದ್ರತಾ ಮತ್ತು ರಕ್ಷಣಾ ವ್ಯವಸ್ಥೆಗೆ ಇದು ಅತ್ಯಗತ್ಯವಾಗಿದೆ ಎಂದು ಜರ್ದಾರಿ ಹೇಳಿದ್ದಾರೆ.
ಕಾರ್ಯತಂತ್ರ ಯೋಜನಾ ವಿಭಾಗದಲ್ಲಿ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ವಿವಿಧ ಪರಿಮಾಣಗಳ ಬಗ್ಗೆ ಜರ್ದಾರಿ ಸಂಕ್ಷಿಪ್ತ ಮಾಹಿತಿ ನೀಡುತ್ತಿದ್ದ ವೇಳೆ ಈ ಹೇಳಿಕೆಯನ್ನು ನೀಡಿದ್ದಾರೆ. |