ದೇಶವನ್ನು ಒಂಬತ್ತು ವರ್ಷಗಳ ಕಾಲ ಆಳಿದ ಸರ್ವಾಧಿಕಾರಿ,ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ವಿರುದ್ಧ ತನಿಖೆ ನಡೆಸುವಂತೆ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತೆ ಆಗ್ರಹಿಸಿದ್ದಾರೆ.
ಮುಷ್ ವಿರುದ್ಧ ಸಂಸದೀಯ ತನಿಖೆ ನಡೆಸಿ,ಅವರ ಆಡಳಿತಾವಧಿಯಲ್ಲಿ ಅಮೆರಿಕ ಭಯೋತ್ಪಾದನೆ ನಿಗ್ರಹಕ್ಕೆ ನೀಡಿದ ಹಣಕಾಸು ದುರ್ಬಳಕೆಯ ಮಾಹಿತಿ ಬಹಿರಂಗವಾಗಬೇಕಿದೆ ಎಂದು ಅವರು ಭಾನುವಾರ ಒತ್ತಾಯಿಸಿದ್ದಾರೆ.
ಅವರು ಲಾಹೋರ್ ಹೊರವಲಯದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ, 1999ರಲ್ಲಿ ಅಧಿಕಾರದ ಗದ್ದುಗೆಗೆ ಏರಿದ್ದ ಮಾಜಿ ಅಧ್ಯಕ್ಷ ಮುಷರ್ರಫ್ ವಿರುದ್ಧ ಸಂಸತ್ ತನಿಖೆಗೆ ಒಳಪಡಿಸಿ, ಭ್ರಷ್ಟಾಚಾರದ ವಿವರನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.
ಮುಷ್ ಭ್ರಷ್ಟಾಚಾರದ ವಿರುದ್ಧ ತನಿಖೆಯನ್ನು ಎದುರಿಸಬೇಕು ಎಂದ ಅವರು, ಅವರ ಆಡಳಿತಾವಧಿಯಲ್ಲಿ ಎಷ್ಟು ಮಂದಿ ಸ್ವಯಂಘೋಷಿತ ಭಯೋತ್ಪಾದಕರನ್ನು ವಿದೇಶಕ್ಕೆ ಹಸ್ತಾಂತರಿಸಿದ್ದಾರೆ ಎಂಬುದನ್ನು ರಾಷ್ಟ್ರದ ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಸಂವಿಧಾನ ವಿರೋಧಿಯಾಗಿ ನಡೆದುಕೊಂಡ ಅವರು ತನಿಖೆಗೆ ಒಳಗಾಗಲೇಬೇಕು. ಆರ್ಮಿ ವರಿಷ್ಠರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು ದೇಶವನ್ನು ಅಧೋಗತಿಗೆ ತಳ್ಳಿದ್ದಾರೆ ಎಂದು ನವಾಜ್ ಆರೋಪಿಸಿದರು.
ಪ್ರಸಕ್ತ ಸಾಲಿನ ಆಗೋಸ್ಟ್‌ನಲ್ಲಿ ಆಡಳಿತರೂಢ ಪಾಕ್ ಮೈತ್ರಿ ಸರ್ಕಾರ ಅಧ್ಯಕ್ಷ ಮುಷರಫ್ ಅವರನ್ನು ಗದ್ದುಗೆಯಿಂದ ಕೆಳಗಿಳಿಸಿತ್ತು. ಇದೀಗ ಪಿಪಿಪಿಯ ಅಸಿಫ್ ಅಲಿ ಜರ್ದಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. |