ನೇಪಾಳ ಜೈಲಿನಲ್ಲಿಯೇ ಕುಖ್ಯಾತ ಬಿಕಿನಿ ಕಿಲ್ಲರ್ 65 ರ ಹರೆಯದ ಶೋಭಾರಾಜ್ನನ್ನು ಮದುವೆಯಾಗಿದ್ದಾಳೆನ್ನಲಾದ 19 ರ ಹರೆಯದ ನೇಪಾಳಿ ಚೆಲುವೆ ನಿಹಿತಾ ಬಿಸ್ವಾಸ್ ಇದೀಗ ತನ್ನ ಹೆಸರನ್ನು ನಿಹಿತಾ ಶೋಭಾರಾಜ್ ಬಿಸ್ವಾಸ್ ಎಂದು ಬದಲಾಯಿಸಿಕೊಂಡಿರುವುದು ಬಯಲಾಗಿದೆ.
ಭಾನುವಾರ ಇಲ್ಲಿನ ಕೇಂದ್ರ ಕಾರಗೃಹಕ್ಕೆ ಭೇಟಿ ನೀಡಿದ್ದ ನಿಹಿತಾ, ಜೈಲಿನ ರಿಜಿಸ್ಟರ್ ಪುಸ್ತಕದಲ್ಲಿ ತನ್ನ ಹೆಸರನ್ನು ನಿಹಿತಾ ಶೋಭಾರಾಜ್ ಬಿಸ್ವಾಸ್ ಎಂದೇ ನಮೂದಿಸಿದ್ದಾಳೆ.
ನಿಹಿತಾ ನಿನ್ನೆ ಇಬ್ಬರು ಅಪರಿಚಿತ ಯುವಕರೊಂದಿಗೆ ಮೋಟಾರ್ ಬೈಕ್ನಲ್ಲಿ ಆಗಮಿಸಿದ್ದು, ಬಳಿಕ ಶೋಭಾರಾಜ್ನನ್ನು ಭೇಟಿಯಾಗಿ 20ನಿಮಿಷಗಳ ಕಾಲ ಮಾತುಕತೆ ನಡೆಸಿ, ಜೈಲಿನಿಂದ ಹೊರಹೋಗುವ ಸಂದರ್ಭದಲ್ಲಿ ರಿಜಿಸ್ಟರ್ ಪುಸ್ತಕದಲ್ಲಿ ತನ್ನ ಹೆಸರನ್ನು ನಮೂದಿಸಿರುವುದಾಗಿ ಜೈಲಿನ ಅಧಿಕಾರಿಗಳು ಪಿಟಿಐಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ನಿಹಿತಾ-ಶೋಭಾರಾಜ್ ಮದುವೆ ವಿವಾದಕ್ಕೆಡೆಯಾಗಿರುವ ಬೆನ್ನಲ್ಲೇ, ಇದೀಗ ಮತ್ತೊಂದು ತಿರುವು ಪಡೆದಿದೆ. ನಿನ್ನೆ ಬಿಳಿ ಶರ್ಟ್,ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿ ಜೈಲಿಗೆ ಆಗಮಿಸಿದ ಸಂದರ್ಭ ನಿಹಿತಾ ಕುತ್ತಿಗೆಯಲ್ಲಿ ಚಿನ್ನದ ತಾಳಿಯೊಂದಿಗೆ ನೇಪಾಳಿ ಸಂಪ್ರದಾಯದ ಮಂಗಳಸೂತ್ರ ಧರಿಸಿದ್ದಳು. ನೇಪಾಳದಲ್ಲಿ ಮದುವೆಯಾದ ಮಹಿಳೆಯರು ಮಾತ್ರ ಮಂಗಳಸೂತ್ರವನ್ನು ಧರಿಸುತ್ತಾರೆ.
ಜೈಲಿನೊಳಗಿದ್ದ ಶೋಭಾರಾಜ್ನನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಆತ, ತಾನು ಆಕೆಯ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಮದುವೆಯಾಗಿರುವುದಾಗಿ ಹೇಳಿರುವುದಾಗಿ ಕಾಠ್ಮಂಡು ಪೋಸ್ಟ್ ಪತ್ರಿಕಾ ವರದಿ ತಿಳಿಸಿದೆ.
ಕುಖ್ಯಾತ ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ನೇಪಾಳಿ ಮೂಲದ ತಮ್ಮ ಹದಿಹರೆಯದ ಪ್ರಿಯತಮೆ ನಿಹಿತಾ ಬಿಸ್ವಾಸ್ ಅವರನ್ನು ವಿಜಯದಶಮಿ ದಿನದಂದು ಮದುವೆಯಾ ಗಿದ್ದಾರೆ ಎಂದು ಭಾರತೀಯ ಮೂಲದ ಮಾಧ್ಯಮಗಳ ವರದಿಯನ್ನು ಕೇವಲ ವದಂತಿ ಎಂದು ಶುಕ್ರವಾರ ಇಲ್ಲಿನ ಕೇಂದ್ರ ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದರು.
ಗುರುವಾರ ಶೋಭರಾಜ್ ನಿಹಿತಾ ಬಿಸ್ವಾಸ್ ಅವರು ಭೇಟಿಯಾದದ್ದು ನಿಜ. ನಿಹಿತಾ ತಾಯಿ ಶೋಭರಾಜ್ ಪರ ವಕಾಲತ್ತು ವಹಿಸಿರುವ ಶಕುಂತಲಾ ಥಾಪಾ ಅವರು ಆಗ ಹಾಜರಿದ್ದರು. ಆದರೆ ಈ ಸಂದರ್ಭದಲ್ಲಿ ಉಂಗುರಗಳ ಜೊತೆಗೆ ಹಾರಗಳ ವಿನಿಮಯ ನಡೆಯಲಿಲ್ಲ.
ಕುಂಕುಮವನ್ನು ಹಚ್ಚಿಕೊಳ್ಳಲಿಲ್ಲ ಹೀಗಾಗಿ ದಸರಾ ಹಬ್ಬದ ದಿನ ಶೋಭರಾಜ್ ಮದುವೆ ನಡೆದಿದೆ ಎಂಬ ವರದಿ ಊಹಾಪೋಹದ್ದು ಎಂದು ಅಧಿಕಾರಿಗಳು ಹೇಳಿದ್ದರು. |