ಪಾಕಿಸ್ತಾನ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಕಮ್ಯೂನಿಷ್ಟ್ ದೇಶವಾದ ಚೀನಾಕ್ಕೆ ನಾಲ್ಕು ದಿನಗಳ ಭೇಟಿ ಅಂಗವಾಗಿ ಮಂಗಳವಾರ ಇಲ್ಲಿಂದ ತೆರಳಿದ್ದಾರೆ.
ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಜರ್ದಾರಿ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಪ್ರಥಮವಾಗಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಲುವಾಗಿ ಚೀನಾಕ್ಕೆ ಭೇಟಿ ನೀಡುತ್ತಿದ್ದು, ಅವರು ಚೀನಾ ಅಧ್ಯಕ್ಷ ಹು ಜಿಂಟಾವೋ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಜರ್ದಾರಿ ಅವರೊಂದಿಗೆ ರಕ್ಷಣಾ ಸಚಿವ, ಯೋಜನಾ ಆಯೋಗದ ಅಧ್ಯಕ್ಷರು, ವಿದೇಶಾಂಗ ಸಚಿವ ಶಾ ಮಹಮೂದ್ ಕ್ಯುರೇಶಿ ಅವರು ತೆರಳಿದ್ದಾರೆ.
ನಾವು ಈ ಮೊದಲಿನಿಂದಲೂ ಚೀನಾದೊಂದಿಗೆ ಉತ್ತಮ ಬಾಂಧವ್ಯ ಮತ್ತು ನಂಬಿಕೆಯನ್ನು ಹೊಂದಿರುವುದಾಗಿ ತಿಳಿಸಿರುವ ಜರ್ದಾರಿ, ನಾಲ್ಕು ದಿನಗಳ ಪ್ರವಾಸದ ವೇಳೆ ಅಣುಒಪ್ಪಂದದ ಬಗ್ಗೆಯೂ ಚರ್ಚಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ನಾಲ್ಕು ದಿನಗಳ ಪ್ರವಾಸದಲ್ಲಿ ಜರ್ದಾರಿ ಅವರು, ಹು ಜಿಂಟಾವೋ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಅಧ್ಯಕ್ಷ ವೋ ಬ್ಯಾಂಗ್ಯೋ, ಪ್ರಧಾನಿ ವೆನ್ ಜಿಯಾಬಾವೋ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ. |