ಆತ್ಮಹತ್ಯಾ ಬಾಂಬ್ ದಾಳಿಯಂತಹ ಹೇಯ ಕೃತ್ಯ ನಡೆಸುವುದು ಇಸ್ಲಾಂ ವಿರೋಧಿ ಧೋರಣೆಯಾಗಿದೆ ಎಂದು ಪಾಕ್‌ನ ಮುಸ್ಲಿಂ ಧರ್ಮಗುರುಗಳ ಸಭೆ ತೀರ್ಮಾನಿಸಿದ್ದು, ಇದರ ವಿರುದ್ಧ ಮಂಗಳವಾರ ಏಕಪಕ್ಷೀಯ ನಿರ್ಧಾರದೊಂದಿಗೆ ಫತ್ವಾ ಹೊರಡಿಸಿದೆ.
ದೇಶಾದ್ಯಂತ ಹೆಚ್ಚುತ್ತಿರುವ ಆತ್ಮಹತ್ಯಾ ಬಾಂಬ್ ದಾಳಿಯಿಂದಾಗಿ ನೂರಾರು ಅಮಾಯಕರು ಬಲಿಯಾಗಿರುವುದನ್ನು ಖಂಡಿಸಿರುವ ಮತ್ತಾಹೀದಾ ಉಲೇಮಾ ಸಮಿತಿ ಇಲ್ಲಿನ ಜಾಮೀಯಾ ನಯೀಮಿಯಾದಲ್ಲಿ ಸಭೆ ಸೇರಿ, ಒಮ್ಮತಾಭಿಪ್ರಾಯದಿಂದ ಇದೊಂದು ಇಸ್ಲಾಂ ವಿರೋಧಿ ಎಂದು ತಿಳಿಸಿದ್ದು,ಫತ್ವಾ ಹೊರಡಿಸಿದೆ.
ಆತ್ಮಹತ್ಯಾ ಬಾಂಬರ್‌ಗಳು ಪಾಕಿಸ್ತಾನದ ತಾಲಿಬಾನ್ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು,ಬಿಗಿ ಬಂದೋಬಸ್ತ್ ಹೊಂದಿರುವ ಸ್ಥಳಗಳ ಮೇಲೂ ಇತ್ತೀಚೆಗೆ ದಾಳಿ ನಡೆಸಲಾಗುತ್ತಿದ್ದು, ರಾವಲ್ಪಿಂಡಿ ಸಿಟಿ ಮತ್ತು ಮಾರ್ರಿಯೊಟ್ ಹೋಟೆಲ್ ಮೇಲೂ ಇಂತಹ ದುಷ್ಕೃತ್ಯ ನಡೆಸುವ ಮೂಲಕ ಹಲವು ಜನರ ಬಲಿ ತೆಗೆದುಕೊಳ್ಳಲಾಗಿತ್ತು.
ಆ ನಿಟ್ಟಿನಲ್ಲಿ ಪಾಕ್‌ನ ಮುತ್ತಾಹೀದಾ ಉಲೇಮಾರ ಸಭೆ ಸೇರಿ, ಇಂತಹ ಆತ್ಮಹತ್ಯಾ ದಾಳಿ ಇಸ್ಲಾಂ ವಿರೋಧಿ ಎಂದು ಘೋಷಿಸಿದೆ. ಅಲ್ಲದೇ ಇಂತಹ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮುತ್ತಾಹೀದಾ ಸದಸ್ಯರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಅಲ್ಲದೇ ಬುಡಕಟ್ಟು ಪ್ರದೇಶದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಪಾಕ್ ಸರ್ಕಾರ ತಕ್ಷಣವೇ ನಿಲ್ಲಿಸಬೇಕು ಎಂದು ತಾಕೀತು ಮಾಡಿರುವ ಉಲೇಮಾ ಸಮಿತಿ, ಅಲ್ಲಿನ ಮುಖಂಡರೊಂದಿಗೆ ಮಾತುಕತೆ ನಡೆಸುವ ಮೂಲಕ ಉಗ್ರಗಾಮಿ ಚಟುವಟಿಕೆಯನ್ನು ನಿಲ್ಲಿಸಬೇಕೆಂದು ಹೇಳಿರುವುದಾಗಿ ಟಿವಿ ಚಾನೆಲ್‌ವೊಂದರ ವರದಿ ತಿಳಿಸಿದೆ.
ಜೆಹಾದ್ ಹಾಗೂ ಪವಿತ್ರ ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸರ್ಕಾರವೇ ಹೊಣೆಯಾಗಿದೆ ಎಂದು ಸಮಿತಿ ದೂರಿದೆ. ಅಲ್ಲದೇ ಜೆಹಾದ್ ಹೆಸರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಇದನ್ನು ಜಿಹಾದ್ ಎಂದು ಕರೆಯುವುದು ಸಮಂಜಸವಾದ ವ್ಯಾಖ್ಯಾನವಲ್ಲ ಎಂದು ಹೇಳಿದೆ. ಉಗ್ರಗಾಮಿ ಸಂಘಟನೆಗಳು ಜಿಹಾದ್ ಹೆಸರಲ್ಲಿ ನಡೆಸುತ್ತಿರುವ ಹೋರಾಟವನ್ನು ಸಮಿತಿ ಬಹುತೇಕ ಸದಸ್ಯರು ಖಂಡಿಸಿರುವುದಾಗಿ ತಿಳಿಸಿದೆ.
ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರ ವಿರುದ್ಧದ ಭ್ರಷ್ಟಾಚಾರ ಕೂಡ ಸಾರ್ವಜನಿಕವಾಗಿ ಬಯಲಾಗಬೇಕು ಎಂದಿರುವ ಸಮಿತಿ, ಪಾಕ್ ಸರ್ಕಾರ ಅಮೆರಿಕ್ಕಿಂತ ಇರಾನ್‌ನನ್ನು ಬೆಂಬಲಿಸಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದೆ.
|