ಬ್ರಿಟನ್ ಇದೀಗ ಮತ್ತೆ ಭಾರೀ ಭಯೋತ್ಪಾದಕರ ದಾಳಿಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಉನ್ನತ ರಕ್ಷಣಾ ಅಧಿಕಾರಿಗಳು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಬ್ರಿಟನ್ ಮತ್ತೆ ಭಯೋತ್ಪಾದನಾ ದಾಳಿ ನಡೆಸುವ ಸಂಚು ರೂಪಿಸಲಾಗುತ್ತಿದೆ ಎಂಬ ಮಹತ್ವದ ಸುಳಿವು ಲಭಿಸಿರುವುದಾಗಿ ಲಾರ್ಡ್ ವೆಸ್ಟ್ ತಿಳಿಸಿದ್ದು, ಆ ನಿಟ್ಟಿನಲ್ಲಿ ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಅವರು ತಿಳಿಸಿದ್ದಾರೆ.
ಭಯೋತ್ಪಾದನಾ ದಾಳಿಯನ್ನು ತಡೆಯುವ ಅಂಗವಾಗಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಆ ಸಂಚು ಭಾರೀ ಪ್ರಮಾಣದಲ್ಲಿರುವುದಾಗಿ ವೆಸ್ಟ್ ಅವರು ಬುಧವಾರ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಮಾತನಾಡುತ್ತ ತಿಳಿಸಿದರು.
ಆದರೆ ಈ ಕುರಿತು ಯಾವುದೇ ಹೆಚ್ಚಿನ ವಿವರಣೆಯನ್ನು ಅವರು ನೀಡಿಲ್ಲ. ಆದರೆ ಭಯೋತ್ಪಾದನೆ ವಿರುದ್ಧ ಕೈಗೊಳ್ಳಬೇಕಾದ ಕಠಿಣ ಕಾನೂನು ಕ್ರಮದ ಜಾರಿಯನ್ನು ಶೀಘ್ರ ಜಾರಿಗೊಳಿಸುವ ವಿಧೇಯಕವನ್ನು ಹೌಸ್ ಆಫ್ ಲಾರ್ಡ್ಸ್ ತಿರಸ್ಕರಿಸಿದೆ.
ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ರಕ್ಷಣಾ ಪಡೆಯ ಮೂಲಗಳು ತಿಳಿಸಿರುವುದಾಗಿ ಬ್ರಿಟಿಷ್ ಡೈಲಿ ಎರಡು ವಾರಗಳ ಹಿಂದೆ ವರದಿಯೊಂದನ್ನು ಪ್ರಕಟಿಸಿತ್ತು.
|