ಭಯೋತ್ಪಾದನೆ ವಿರುದ್ಧ ಹಿಂದಿನ ಸರ್ಕಾರದ 'ಭಯೋತ್ಪಾದನೆ ವಿರುದ್ಧ ಸಮರ' ಎಂಬ ನೀತಿಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ತಿಳಿಸಿದ್ದಾರೆ.
ಇದು ಮುಂದಿನ ದಿನಗಳಲ್ಲೂ ಅವಶ್ಯಕವಾಗಿದ್ದು, ಇದು ಕರಾರುವಕ್ಕಾದ ನಿರ್ಧಾರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ನಿರ್ಧಾರವನ್ನು ಅವರು ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ತಾನು ಕೂಡ ಭಯೋತ್ಪಾದನೆ ವಿರುದ್ಧ ಸಮರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆಂದು ದಿ ಡೈಲಿ ಟೈಮ್ಸ್ ಮುಷರ್ರಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ವರದಿಯಲ್ಲಿ ತಿಳಿಸಿದೆ.
ಇತ್ತೀಚೆಗಷ್ಟೇ ಪದವಿಯಿಂದ ಕೆಳಗಿಳಿದ ಮುಷರ್ರಫ್ ಅವರು ರಾವಲ್ಪಿಂಡಿಯಲ್ಲಿನ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಔತಣಕೂಟದ ಸಂದರ್ಭದಲ್ಲಿ ಹೇಳಿರುವುದಾಗಿ ಟೈಮ್ಸ್ ವರದಿ ವಿವರಿಸಿದೆ.
ಔತಣಕೂಟದಲ್ಲಿ ಆರ್ಮಿಯ ಹಿರಿಯ ಅಧಿಕಾರಿ ಅಶ್ಫಾಕ್ ಕಯಾನಿ, ನಿವೃತ್ತ ಅಡ್ಮಿರಲ್ ಅಫ್ಜಲ್ ತಾಹೀರ್,ನಿವೃತ್ತ ಲೆಫ್ಟಿನೆಂಟ್ ಜನರಲ್ ಸಲಾಬುದ್ದೀನ್ ಸಾತಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ಸಾಬಿರ್, ಸಫ್ದಾರ್ ಹುಸೈನ್ ಮತ್ತು ಅತಾರ್ ಅಲಿ ಖಾನ್ ಅವರು ಪಾಲ್ಗೊಂಡಿದ್ದರು. |