ಇತ್ತೀಚೆಗಷ್ಟೇ ಸಾವನ್ನಪ್ಪಿರುವುದಾಗಿ ಸುದ್ದಿಯಾಗಿದ್ದ ಪಾಕಿಸ್ತಾನ್ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹ್ಸೂದ್ ಇದೀಗ ಆತ ಎರಡನೇ ಮದುವೆಯಾಗಿರುವುದಾಗಿ ವರದಿಯೊಂದು ತಿಳಿಸಿದೆ.
ಪಾಕಿಸ್ತಾನದಲ್ಲಿನ ತಾಲಿಬಾನ್ ಗುಂಪಿನ ತೆಹ್ರೀಕ್ ಇ ತಾಲಿಬಾನ್ ಅಥವಾ ಪಾಕಿಸ್ತಾನ್ ತಾಲಿಬಾನ್ ಮೂವ್‌ಮೆಂಟ್‌ನ ಮುಖಂಡನಾಗಿರುವ ಮೆಹ್ಸೂದ್, ತಾಲಿಬಾನ್ ಪ್ರಾಬಲ್ಯ ಹೊಂದಿರುವ ದಕ್ಷಿಣ ವಜಿರಿಸ್ತಾನದ ದ್ವಾವಾ ತೊಯ್ ಗ್ರಾಮದಲ್ಲಿ ಯುವತಿಯೊಬ್ಬಳಿಗೆ ತಾಳಿಕಟ್ಟುವ ಮೂಲಕ ಎರಡನೇ ವಿವಾಹವಾಗಿರುವುದಾಗಿ ದಿ ನ್ಯೂಸ್ ಡೈಲಿ ವರದಿ ಹೇಳಿದೆ.
ಗೆರಿಲ್ಲಾ ಕಮಾಂಡರ್‌ನ ಎರಡನೇ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಅನ್ನ ಮತ್ತು ಕುರಿಮಾಂಸದ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತಂತೆ.
ಮೆಹ್ಸೂದ್ ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾನೆ. ಆದರೆ ಆ ಆರೋಪವನ್ನು ಮೆಹ್ಸೂದ್ ಅಲ್ಲಗಳೆದಿದ್ದ.
ಮೆಹ್ಸೂದ್ ಮಧುಮೇಹ ಸೇರಿದಂತೆ ರಕ್ತದೊತ್ತಡ,ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿದ್ದು,ಇತ್ತೀಚೆಗಷ್ಟೇ ಆತ ಸಾವನ್ನಪ್ಪಿರುವುದಾಗಿ ಸಿಎನ್‌ಎನ್ ಮತ್ತು ಪಾಕಿಸ್ತಾನದ ಜಿಯೋ ನ್ಯೂಸ್ ಚಾನೆಲ್ ವರದಿಯನ್ನು ಪ್ರಕಟಿಸಿತ್ತು. ಆದರೆ ದಿನದ ಬಳಿಕ ಆತ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಮೂಲಕ ವರದಿಯನ್ನು ಹುಸಿಗೊಳಿಸಿದ್ದ.
ಆದರೆ ಮೆಹ್ಸೂದ್ ಮದುವೆಯಾಗಿರುವ ಯುವತಿಯ ವಯಸ್ಸನ್ನು ವರದಿ ಖಚಿತವಾಗಿ ತಿಳಿಸಿಲ್ಲ, ಬುಡಕಟ್ಟಿನ ಹಿರಿಯ ವ್ಯಕ್ತಿಯಾದ ಇಕ್ರಾಮುದ್ದೀನ್ ಎಂಬಾತನ ಮಗಳನ್ನು ಮದುವೆಯಾಗಿರುವುದಾಗಿ ವರದಿ ಹೇಳಿದೆ.
ಮೊದಲ ಪತ್ನಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು,ಗಂಡು ಸಂತಾನವಿಲ್ಲ ಎಂದು ಮೆಹ್ಸೂದ್ ಆಪ್ತ ಕಮಾಂಡರ್‌ನೊಬ್ಬ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಅಫ್ಘಾನ್ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮೆಹ್ಸೂದ್ ಅಲ್‌ಕೈದಾ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಬುಡಕಟ್ಟು ಪ್ರದೇಶದಲ್ಲಿ 20 ರಿಂದ 30ಸಾವಿರ ಜನರನ್ನೊಳಗೊಂಡ ಗುಂಪಿನೊಂದಿಗೆ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದಾನೆ. |