ರಾಷ್ಟ್ರದ ಆಂತರಿಕ ಭದ್ರತೆಗೆ ಬೆದರಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರೇತರ ಹಿಂದೂ ಹಕ್ಕು ರಕ್ಷಣೆ ಕಾರ್ಯಪಡೆ (ಹಿಂಡ್ರಾಫ್) ಮೇಲೆ ನಿಷೇಧ ಹೇರಿರುವುದಾಗಿ ಮಲೇಶ್ಯಾ ಸರ್ಕಾರ ಗುರುವಾರ ಘೋಷಿಸಿದೆ.
ದೇಶದಲ್ಲಿ ಹಿಂಡ್ರಾಫ್ ಮೇಲೆ ನಿಷೇಧ ಹೇರಿರುವುದಾಗಿ ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಘೋಷಿಸಲಾಗಿದೆ ಎಂದು ಗೃಹ ಸಚಿವ ಸೈಯದ್ ಹಮೀದ್ ಅಲ್‌ಬಾರ್ ಅವರು ತಿಳಿಸಿದ್ದು, ಮಲೇಶ್ಯಾದಲ್ಲಿ ಅಲ್ಪಸಂಖ್ಯಾತರಾಗಿರುವ ಭಾರತೀಯ ಜನಾಂಗದ ಈ ಸಂಘಟನೆ ಕಾನೂನು ಬಾಹಿರದ್ದಾಗಿದೆ ಎಂದು ಹೇಳಿದರು.
1966ರ ಸಾಮಾಜಿಕ ಕಾಯ್ದೆಯ ಸೆಕ್ಷನ್ 3 ಮತ್ತು 5 ರ ಅನ್ವಯ ತನಿಖೆ ನಡೆಸುವ ಮೂಲಕ, ಹಿಂಡ್ರಾಫ್ ಅನ್ನು ಕಾನೂನು ಬಾಹಿರ ಮತ್ತು ಶಾಂತಿಭಂಗ ತರುವ ಸಂಘಟನೆಯಾಗಿದೆ ಎಂದು ಘೋಷಿಸಲಾಗಿದೆ ಎಂದು ಗೃಹಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ಸರ್ಕಾರದ ಈ ನಿರ್ಧಾರವನ್ನು ವಿರೋಧ ಪಕ್ಷದ ಸಂಸದರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಹಿಂಡ್ರಾಫ್ ನಿಷೇಧದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸುವ ಸಲುವಾಗಿ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದ್ದಾರೆ.
ಇಂತಹ ಏಕಪಕ್ಷೀಯ ನಿರ್ಧಾರ ಭಾರತೀಯ ಸರ್ವಧರ್ಮ ಏಕತೆಯ ಹಿತಾಸಕ್ತಿಗೆ ಧಕ್ಕೆ ತರುವಂತಾಗಿದ್ದು, ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಎಂ.ಕುಲಸೇಕರನ್ ಆರೋಪಿಸಿದ್ದು,ಪ್ರಧಾನಿ ಅಬ್ದುಲ್ಲಾ ಅಹಮದ್ ಬದ್ವಾಯಿ ಅವರು ಹಿಂಡ್ರಾಫ್ ಮುಖಂಡರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿಯೂ ಕೂಡ,ಮಾತುಕತೆ ನಡೆಸಿಲ್ಲ ಎಂದು ದೂರಿದರು.
ಇತ್ತೀಚೆಗಷ್ಟೇ ಹಿಂದೂ ಹಕ್ಕು ರಕ್ಷಣೆ ಕಾರ್ಯಪಡೆ(ಹಿಂಡ್ರಾಫ್) ಮೇಲೆ ನಿಷೇಧ ವಿಧಿಸಲು ಮಲೇಶ್ಯಾ ಪರಿಶೀಲಿಸುತ್ತಿದೆ ಎಂದು ಮಲೇಶಿಯ ಅಧಿಕಾರಿಗಳು ತಿಳಿಸಿದ್ದರು. ಬಹು ಜನಾಂಗೀಯ ರಾಷ್ಟ್ರದಲ್ಲಿ ತಮ್ಮನ್ನು ಕಡೆಗಣಿಸಿರುವ ವಿರುದ್ಧ ಭಾರತೀಯ ಜನಾಂಗವು ವ್ಯಾಪಕ ರ‌್ಯಾಲಿಯನ್ನು ಕಳೆದ ವರ್ಷ ಹಮ್ಮಿಕೊಂಡಿತ್ತು.
ಹಿಂಡ್ರಾಫ್ ನೊಂದಾಯಿತ ಸಂಸ್ಥೆಯಲ್ಲದ್ದರಿಂದ ಸಚಿವಾಲಯದ ಕಾನೂನು ಘಟಕವು ಈ ಸಂಘಟನೆಯನ್ನು ನಿಷೇಧಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಮುನ್ಸೂಚನೆ ನೀಡಿತ್ತು.
ಕಳೆದ ವರ್ಷ ನಡೆದ ಹಿಂಸಾಚಾರದಲ್ಲಿ ಹಿಂಡ್ರಾಫ್‌ನ ಐದು ಮಂದಿ ನಾಯಕರನ್ನು ಮಲೇಷ್ಯಾ ಸರಕಾರವು ಆಂತರಿಕ ಭದ್ರತಾ ಕಾಯ್ದೆಯಡಿ ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಭಾರತೀಯರನ್ನು ಕಡೆಗಣಿಸಲಾಗುತ್ತಿರುವುದನ್ನು ವಿರೋಧಿಸಿ ಕಳೆದ ತಿಂಗಳು ಮಲೇಷ್ಯಾ ಪ್ರತಿಭಟನೆಯಲ್ಲಿ ನಿರತರಾಗಿದ್ದ ಈ ಮಂದಿ ನಾಯಕರನ್ನು ಪೊಲೀಸರು ಐಎಸ್ಎ ಕಾಯ್ದೆಯಡಿ ಬಂಧಿಸಲಾಗಿತ್ತು. |