ಎರಡು ಅಣು ರಿಯಾಕ್ಟರ್‌ಗಳ ನಿರ್ಮಾಣದ ಒಪ್ಪಂದಕ್ಕೆ ಚೀನಾ-ಪಾಕಿಸ್ತಾನ ಸಹಿ ಹಾಕಿವೆ ಎಂದು ಪಾಕ್ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಶನಿವಾರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಚೀನಾ ಪ್ರವಾಸ ಕೈಗೊಂಡಿದ್ದ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರು ದ್ವಿಪಕ್ಷೀಯ ಮಾತುಕತೆಯ ಬಳಿಕ ಸಹಿ ಹಾಕಿದ 12ಒಪ್ಪಂದಗಳಲ್ಲಿ ರಿಯಾಕ್ಟರ್ ನಿರ್ಮಾಣವೂ ಕೂಡ ಸೇರಿದೆ ಎಂದು ಖುರೇಶಿ ವಿವರ ನೀಡಿದರು.
ಇಸ್ಲಾಮಾಬಾದ್‌ನಿಂದ 124ಕಿ.ಮೀ.ದೂರದಲ್ಲಿ ಪರಮಾಣು ಇಂಧನ ಘಟಕವನ್ನು ಸ್ಥಾಪಿಸಲು ಈ ಮೊದಲೇ ಚೀನಾ ಸಲಹೆ ನೀಡಿತ್ತು. ಇದೀಗ ಅಂತಹದ್ದೇ ಎರಡನೇ ಘಟಕದ ಕೆಲಸ ಪ್ರಗತಿಯಲ್ಲಿದ್ದು, 2011ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಈ ಎರಡು ನೂತನ ಅಣು ರಿಯಾಕ್ಟರ್‌ಗಳ ನಿರ್ಮಾಣ ಕಾರ್ಯ ಅಂತಿಮಗೊಳ್ಳುವ ಮೂಲಕ ಪಾಕ್ ಹೆಚ್ಚುವರಿಯಾಗಿ 680ಮೆಗಾ ವ್ಯಾಟ್ ವಿದ್ಯುತ್ ಅನ್ನು ಪಡೆಯಲಿದೆ ಎಂದು ಹೇಳಿದರು.
ಪಾಕಿಸ್ತಾನ ಅಣು ಒಪ್ಪಂದದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಚೀನಾ ರಹಸ್ಯವಾಗಿ ಎಲ್ಲಾ ರೀತಿಯ ಬೆಂಬಲ ನೀಡುತ್ತಿರುವುದಾಗಿ ಪಾಕ್ ಮಾಧ್ಯಮಗಳು ಆರೋಪಿಸಿವೆ.
ಆ ನಿಟ್ಟಿನಲ್ಲಿ ಜರ್ದಾರಿ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಅಣು ಒಪ್ಪಂದದ ಕುರಿತು ಬೀಜಿಂಗ್ ಮುಖಂಡರೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿವೆ. |