ಇಲ್ಲಿನ ಜೈಲಿನೊಳಗೆ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡ ಬಳಿಕ ಕೈದಿಗಳ ನಡುವೆ ಭುಗಿಲೆದ್ದ ಹಿಂಸಾಚಾರದಿಂದ ಕನಿಷ್ಠ 21ಮಂದಿ ಸಾವಿಗೀಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪೂರ್ವ ತಾಮುಲಿಪಾಸ್ ರಾಜ್ಯದ ರೆನೋಸಾ ಜೈಲಿನಲ್ಲಿ 2000 ಕೈದಿಗಳಿದ್ದು, ಕೈದಿಗಳ ನಡುವೆ ದಂಗೆ ಭುಗಿಲೆದ್ದ ಪರಿಣಾಮ ಈ ಸಾವು ಸಂಭವಿಸಿರುವುದಾಗಿ ನಂಬಲರ್ಹ ಮೂಲಗಳು ಹೇಳಿವೆ.
ಇದೀಗ ಜೈಲಿನಲ್ಲಿ ಉದ್ವಿಗ್ನ ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ರಾಜ್ಯದ ಮುಖ್ಯ ಪ್ರಾಸಿಕ್ಯೂಟರ್ ತಿಳಿಸಿದ್ದು, ಜೈಲು ಆವರಣದಲ್ಲಿನ 21ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೈಲಿನೊಳಗೆ ಏಕಾಏಕಿ ನಡೆದ ದಂಗೆ ಕುರಿತು ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದ ಜೈಲಿನ ಅಧಿಕಾರಿಗಳು, ಕೆಲವು ಕೈದಿಗಳು ಕಟ್ಟಡದೊಳಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಉಳಿದ ಕೈದಿಗಳು ಉದ್ನಿಗ್ನಗೊಂಡ ಪರಿಣಾಮ ಘಟನೆ ನಡೆದಿರುವುದಾಗಿ ಜೈಲ್ ವಾರ್ಡನ್ ಅಪೋಲೋನಿಯೋ ವಿಲ್ಲಾರ್ರೆಲ್ ಸೊಟೋ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ರೆನೋಸಾ ಜೈಲಿನೊಳಗಿರುವ ಕೈದಿಗಳಲ್ಲಿ ನಟೋರಿಯಸ್ ಕೈದಿಗಳು ಇದ್ದಿದ್ದು, ಅದರಲ್ಲೊಂದು ಗುಂಪಿನಲ್ಲಿ ಹ್ಯಾಂಡ್ ಗ್ರೆನೇಡ್ ಇರುವುದಾಗಿಯೂ ಅಧಿಕಾರಿಗಳು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. |