ಭ್ರಷ್ಟಾಚಾರದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಥಾಯ್‌ಲ್ಯಾಂಡ್ ಸುಪ್ರೀಂಕೋರ್ಟ್ ಮಂಗಳವಾರ ಮಾಜಿ ಪ್ರಧಾನಿ ಥಾಕ್ಸಿನ್ ಶಿನ್‌ವಾತ್ರಾದೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಮೂರು ವರ್ಷಗಳಿಂದ ಥಾಕ್ಸಿನ್ ಅವರ ಭ್ರಷ್ಟಾಚಾರ ಪ್ರಕರಣ ಥಾಯ್‌ಲ್ಯಾಂಡ್ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಒಂಬತ್ತು ಮಂದಿಯನ್ನೊಳಗೊಂಡ ನ್ಯಾಯಪೀಠ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ನೀಡಿದೆ.
ಪ್ರಕರಣ ರಾಜಕೀಯವಾಗಿ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಥಾಕ್ಸಿನ್ ಅವರು ಬ್ರಿಟನ್‌ಗೆ ಗಡಿಪಾರುಗೊಂಡು ಅಲ್ಲಿಯೇ ನೆಲೆಸಿದ್ದರು. ಸೆಂಟ್ರಲ್ ಬ್ಯಾಂಕ್ ಫಂಡ್‌ನಿಂದ ಥಾಕ್ಸಿನ್ ಅವರ ಪತ್ನಿ ಖರೀದಿಸಿದ ಭೂ ಹಗರಣದಲ್ಲಿ ಥಾಕ್ಸಿನ್ ಕೂಡ ಪಾಲುದಾರರಾಗಿದ್ದರು.
ದೇಶದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಉಲ್ಲಂಘಿಸಿರುವ ಕಾರಣದಿಂದಾಗಿ ಮಾಜಿ ಪ್ರಧಾನಿಗೆ ಎರಡು ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿರುವುದಾಗಿ ನ್ಯಾಯಾಧೀಶರು ತೀರ್ಪಿನ್ನು ಓದುತ್ತಾ ತಿಳಿಸಿದರು.
ತೀರ್ಪಿನ ಬಳಿಕ ಮಾತನಾಡಿದ ಥಾಕ್ಸಿನ್, ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ ಎಂದು ಆರೋಪಿಸಿದ್ದು, ಆ ನಿಟ್ಟಿನಲ್ಲಿ ಥಾಯ್ ಕೋರ್ಟ್ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿಲ್ಲ ಎಂದು ಹೇಳಿದರು.
2006ರಲ್ಲಿ ಥಾಯ್ ಸರ್ಕರಾವನ್ನು ವಜಾಗೊಳಿಸಿದ ಮಿಲಿಟರಿ ಆಡಳಿ ಬಳಿಕ ನಡೆಸಿದ ತನಿಖೆಯ ಮುಖಾಂತರ ಮುಖಾಂತರ ಥಾಕ್ಸಿನ್ ಹಾಗೂ ಅವರ ಸಮೀಪವರ್ತಿಗಳ ಭ್ರಷ್ಟಾಚಾರದ ಪ್ರಕರಣವನ್ನು ಬಯಲಿಗೆಳೆದು, ದೂರನ್ನು ದಾಖಲಿಸಿತ್ತು.
ಕೋರ್ಟ್ ಎಚ್ಚರಿಕೆ: ಯಾವುದೇ ಕಾರಣಕ್ಕೂ ಥಾಕ್ಸಿನ್ ಅವರ ಬೆಂಬಲಿಗರು ಕಾನೂನನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದಲ್ಲಿ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಎಚ್ಚರಿಸಿದೆ.
ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಮುಂಭಾಗದಲ್ಲಿ 100ಮಂದಿ ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿಗಳು ಸೇರಿದಂತೆ 300ಮಂದಿ ಸರ್ಕಾರಿ ಪರ ಬೆಂಬಲಿಗರು ಈ ಸಂದರ್ಭದಲ್ಲಿ ಹಾಜರಿದ್ದರು.
2005ರಲ್ಲಿ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪೀಪಲ್ಸ್ ಅಲೆಯನ್ಸ್ ಫಾರ್ ಡೆಮೋಕ್ರೆಸಿ (ಪಿಎಡಿ) ಥಾಕ್ಸಿನ್ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಥಾಕ್ಸಿನ್ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವಂತೆ ಆಗ್ರಹಿಸಿತ್ತು. |