ಅಮೆರಿಕ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಡೆಮೊಕ್ರಟಿಕ್‌ನ ಬರಾಕ್ ಒಬಾಮ ಅವರು ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಜಾನ್ ಮೆಕೈನ್‌ಗಿಂತ ಮುಂದಿರುವುದಾಗಿ ಬುಧವಾರ ಬಿಡುಗಡೆಗೊಂಡ ನೂತನ ಚುನಾವಣಾ ಪೂರ್ವ ಸಮೀಕ್ಷೆಯೊಂದು ತಿಳಿಸಿದೆ.
ಅಮೆರಿಕ ಅಧ್ಯಕ್ಷ ಪಟ್ಟದ ಚುನಾವಣೆಗೆ ಕೇವಲ ಎರಡು ವಾರ ಬಾಕಿ ಇರುವಾಗಲೇ ಇದೀಗ ನೂತನ ಸಮೀಕ್ಷೆ ಹೊರಬಿದ್ದಿದ್ದು, ಒಬಾಮ ಅವರ ಆಯ್ಕೆ ಬಹುತೇಕ ಖಚಿತವಾಗತೊಡಗಿದೆ.
ದಿ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಎನ್‌ಬಿಸಿ ನ್ಯೂಸ್ ಜಂಟಿಯಾಗಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಶೇ.52ರಷ್ಟು ಜನ ಒಬಾಮ ಅವರ ಪರವಾಗಿದ್ದರೆ, ಶೇ.42 ಮೆಕೈನ್ ಅವರ ಪರವಾಗಿರುವುದಾಗಿ ತಿಳಿಸಿದೆ.
ಚುನಾವಣೆಯಲ್ಲಿ ಮತದ ಪ್ರಮಾಣ ಶೇ.2.9ರಷ್ಟು ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆ ಇರುವುದಾಗಿ ಸಮೀಕ್ಷೆ ಹೇಳಿದೆ. ಅತಿ ಹೆಚ್ಚಿನ ಮತದಾರರು ಡೆಮೋಕ್ರಟ್‌ನ ಸಿದ್ದಾಂತ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಹೊಂದಿರುವುದಾಗಿ ವಿವರಿಸಿದೆ.
ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಣಾಹಣಿಯು ಅಂತಿಮ ಹಂತದಲ್ಲಿದ್ದು, ಮತದಾರರು ಬರಾಕ್ ಅವರ ಪರ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ ಎಂದು ಡೆಮೋಕ್ರಟ್‌ನ ಪೀಟರ್ ಡಿ ಹಾರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಿಪಬ್ಲಿಕ್‌ನ ಜಾನ್ ಮೆಕೈನ್‌ಗಿಂತ ವೈಟ್ ಹೌಸ್‌ಗೆ ಬರಾಕ್ ಒಬಾಮ ಅವರೇ ಸೂಕ್ತವಾದ ಅಭ್ಯರ್ಥಿಯಾಗಿದ್ದಾರೆಂದು ಮತದಾರರು ತಿಳಿಸಿರುವುದಾಗಿ ಸಮೀಕ್ಷೆ ಹೇಳಿದೆ. |