ಕೊಲೆ ಪ್ರಕರಣವೊಂದರ ಆರೋಪಿಗೆ ಟೆಕ್ಸಾಸ್ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆ ಮೇರೆಗೆ, ಮಂಗಳವಾರ 29ರ ಹರೆಯದ ಜೋಸೆಫ್ ರೇ ರೀಸ್ ಎಂಬಾತನಿಗೆ ಲೆಥಾಲ್ ವಿಷಯುಕ್ತ ಚುಚ್ಚುಮದ್ದು ನೀಡಿ ಸಾಯಿಸಲಾಯಿತು ಎಂದು ನ್ಯಾಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
1999ರಲ್ಲಿ 64ರ ಹರೆಯದ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಆರೋಪದ ಮೇಲೆ ಜೋಸೆಫ್‌ಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಜೋಸೆಫ್ ಮರಣದಂಡನೆಗೆ ಒಳಗಾದ ಈ ವರ್ಷದ 12ನೇ ಆರೋಪಿಯಾಗಿದ್ದಾರೆ.
ಜೋಸೆಫ್ ಮಂಗಳವಾರ ಸಂಜೆ 6.17ಕ್ಕೆ ಸಾವನ್ನಪ್ಪಿರುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು. ಸಾಯುವ ಅಂತಿಮ ಹಂತದಲ್ಲಿ 'ತಾನು ಮಾಡಿದ ಅಪರಾಧವನ್ನು ಮರೆತು ಬಿಡಿ ಎಂದ ಜೋಸೆಫ್ ಶಾಂತಮನಸ್ಥಿತಿಯಿಂದ ದೇವರನ್ನು ಪ್ರಾರ್ಥಿಸಿರುವುದಾಗಿ ಪೊಲೀಸ್ ಪ್ರಕಟಣೆ ಹೇಳಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ 12ನೇ ಆರೋಪಿಯಾಗಿದ್ದು, ಇನ್ನು ಒಂಬತ್ತು ಮಂದಿ ಆರೋಪಿಗಳು ಮರಣದಂಡನೆ ಶಿಕ್ಷೆಗೆ ಕಾಯುತ್ತಿರುವುದಾಗಿ ತಿಳಿಸಿದೆ. |