ಹೆಚ್ಚಿನ ಇಂಧನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಜೋರ್ಡಾನ್ ಗುರುವಾರ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತವಾಗಿ ದಕ್ಷಿಣ ಕೊರಿಯಾದೊಂದಿಗೆ ಸಹಿ ಹಾಕಿದೆ.
ಎರಡು ದೇಶಗಳ ಮಧ್ಯೆ ನಡೆದ ಒಡಂಬಡಿಕೆಯ ಪ್ರಕಾರ ಡಿಸೆಂಬರ್‌ನಲ್ಲಿ ದ್ವಿಪಕ್ಷೀಯ ಮಾತುಕತೆಯ ಮೂಲಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಿದೆಯೆಂದು ಜೋರ್ಡಾನ್‌ನ ಅಣು ಶಕ್ತಿ ಕಮಿಷನ್ ಮುಖ್ಯಸ್ಥ ಖಾಲಿದ್ ತುಕನ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ತಿಳಿಸಿದರು.
ಈ ದ್ವಿಪಕ್ಷೀಯ ಒಪ್ಪಂದದ ಮೂಲಕ ಜೋರ್ಡಾನ್‌ಗೆ ದಕ್ಷಿಣ ಕೊರಿಯಾವು ಅಣ್ವಸ್ತ್ರ ಸುರಕ್ಷತೆ, ತಾಂತ್ರಿಕ ನೆರವನ್ನು ನೀಡಲಿದ್ದು ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಜಂಟಿಯಾಗಿ ಕಾರ್ಯನಿರ್ವಹಿಸಲು ನೆರವು ನೀಡಲಿದೆ.
ಸುಮಾರು 95ಶೇ.ದಷ್ಟು ಇಂಧನವನ್ನು ಜೋರ್ಡಾನ್ ಆಮದು ಮಾಡಿಕೊಳ್ಳಬೇಕಾಗಿದ್ದು, ಆ ನಿಟ್ಟಿನಲ್ಲಿ ಅಮೆರಿಕ, ಚೀನಾ, ಫ್ರಾನ್ಸ್, ಬ್ರಿಟನ್ ದೇಶಗಳೊಂದಿಗೆ ಪರಮಾಣು ಒಪ್ಪಂದದ ಸಹಕಾರಕ್ಕೆ ಕೈಜೋಡಿಸಿದೆ. ಅಲ್ಲದೇ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೆನಡಾ, ರಶ್ಯಾ, ರೋಮಾನಿಯಾ ಮತ್ತು ಜೆಕ್ ಗಣರಾಜ್ಯಗಳ ಅಂಕಿತ ನೀಡುವ ಭರವಸೆಯಲ್ಲಿದೆ.
2030ರ ವೇಳೆಗೆ ಸುಮಾರು ಶೇ.30ರಷ್ಟು ಪರಮಾಣು ಇಂಧನ ಪೂರೈಕೆಯಾಗಲಿದೆ ಎಂದು ಜೋರ್ಡಾನ್ ಭರವಸೆ ವ್ಯಕ್ತಪಡಿಸಿದೆ. |