ಪಾಕಿಸ್ಥಾನ ಐಎಸ್‌ಐನ ನೂತನ ವರಿಷ್ಠಾಧಿಕಾರಿ ಲೆಪ್ಟಿನೆಂಟ್ ಜನರಲ್ ಅಹಮ್ಮದ್ ಶುಜಾ ಪಾಷಾ ವಾರಾಂತ್ಯದಲ್ಲಿ ವಾಷಿಂಗ್ಟನ್‌ಗೆ ತೆರಳಲಿದ್ದು, ಅಲ್ಲಿ ಅವರು ಸಿಐಎ ಡೈರೆಕ್ಟರಾದ ಮೈಕಲ್ ವಿ ಹೇಡನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಅಮೆರಿಕ ಸೈನ್ಯದ ವರಿಷ್ಠಾಧಿಕಾರಿ ಜನರಲ್ ಡೇವಿಡ್ ಎಚ್ ಪೆಟ್ರೋಸ್ ಅಕ್ಟೋಬರ್ 31ರಂದು ಪಾಕಿಸ್ಥಾನಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಅವರು ಅಫ್ಘಾನಿಸ್ತಾನಕ್ಕೂ ಭೇಟಿ ನೀಡಲಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ತಿಳಿಸಿದೆ.
ಸಿಐಎ ಮತ್ತು ಐಎಸ್‌ಐ ಗುಪ್ತಚರ ದಳದ ವರಿಷ್ಠಾಧಿಕಾರಿಗಳು,ಗುಪ್ತಚರ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಭಯೋತ್ಪಾದನಾ ಸಂಘಟನೆಗಳಾದ ಅಲ್ ಕೈದಾ ಮತ್ತು ತಾಲಿಬಾನ್ ಉಗ್ರರನ್ನು ಮಟ್ಟ ಹಾಕುವ ಕುರಿತು ವಿಸ್ತ್ರತ ಚರ್ಚೆ ನಡೆಸಲಿದ್ದಾರೆ.
ಏತನ್ಮಧ್ಯೆ ಪಾಕಿಸ್ತಾನಿ ಗುಪ್ತಚರು ಇಲಾಖೆಯ ಈ ಹಿಂದಿನ ಮಾಹಿತಿಯನ್ನು ತಾವು ನಂಬುವುದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದು, ಅವೆಲ್ಲ ರಹಸ್ಯಗಳನ್ನು ಉಗ್ರಗಾಮಿ ಸಂಘಟನೆಗಳಿಗೆ ರವಾನಿಸುತ್ತಿರುವುದಾಗಿ ಹೇಳಿದೆ.
ಪಾಕ್‌ನಲ್ಲಿ ನಡೆಸಿದ ಕಾರ್ಯಾಚರಣೆಯ ಕುರಿತಾಗಿ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲು ಅಮೆರಿಕ ನಕಾರ ವ್ಯಕ್ತಪಡಿಸುತ್ತಿದೆ ಎಂದು ಪಾಕ್ ಈಗಾಗಲೇ ಗಂಭೀರವಾಗಿ ಆರೋಪಿಸಿತ್ತು. ಅಲ್ಲದೇ ಪಾಕ್ ಪ್ರಾಂತ್ಯದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸುವ ಮೂಲಕ ಅಮಾಯಕರನ್ನು ಬಲಿಗೈಯುತ್ತಿದೆ ಎಂದು ದೂರಿದೆ.
ಪಾಕಿಸ್ತಾನ ಬುಡಕಟ್ಟು ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಕೈದಾ ಮತ್ತು ತಾಲಿಬಾನ್ ಉಗ್ರರ ವಿರುದ್ಧ ಹೋರಾಡುವ ಕುರಿತು ಅ.31ರಂದು ಮಾತುಕತೆ ನಡೆಯಲಿದೆ ಎಂದು ಪುನರುಚ್ಚರಿಸಿದೆ. |