ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳ ಭಯೋತ್ಪಾದಕರ ಹೆಸರುಗಳ ಪಟ್ಟಿಯನ್ನು ಶುಕ್ರವಾರ ರಾತ್ರಿ ಪರಸ್ಪರ ವಿನಿಮಯ ಮಾಡಿಕೊಂಡಿದ್ದು, ಭಯೋತ್ಪಾದಕರ ನಿಗ್ರಹಕ್ಕಾಗಿ ಭಯೋತ್ಪಾದಕ ಜಂಟಿ ನಿಗ್ರಹ ಪಡೆ ಕಾರ್ಯಯೋಜನೆಯನ್ನು ಮುಂದುವರಿಸಿರುವುದಾಗಿ ತಿಳಿಸಿದೆ.
ಎರಡು ದೇಶಗಳ ನಡುವೆ ನಡೆದ ಮಾತುಕತೆಯ ಬಳಿಕ, ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿದ ಉಗ್ರರ ವಿವರ ಸೇರಿದಂತೆ ಎರಡೂ ದೇಶಗಳು ಹೆಸರುಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಯಿತು ಎಂದು ಪ್ರಕಟಣೆಯಲ್ಲಿ ಹೇಳಿದೆ.
ಸಕಾರಾತ್ಮಕ ಮತ್ತು ಉತ್ತಮ ಬಾಂಧವ್ಯವನ್ನು ಹೊಂದುವ ನಿಟ್ಟಿನಲ್ಲಿ ಸಭೆಯನ್ನು ನಡೆಸಲಾಗಿದ್ದು, ಎರಡು ದೇಶಗಳಲ್ಲಿ ತಾಂಡವಾಡುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕುರಿತು ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.
ಕೆಲವೊಂದು ಪ್ರಕರಣಗಳಲ್ಲಿ ಐಎಸ್ಐ ಭಾಗಿಯಾಗಿರುವ ಕುರಿತಾಗಿಯೂ ಸೂಕ್ಷ್ಮ ಸಾಕ್ಷ್ಯ ಇರುವುದಾಗಿಯೂ ಭಾರತೀಯ ಅಧಿಕಾರಿಗಳು ಆರೋಪಿಸಿದ್ದು, ಜುಲೈ 7ರಂದು ಕಾಬೂಲ್‌ನ ಭಾರತೀಯ ರಾಯಭಾರಿ ಕಚೇರಿ ಮೇಲೆ ನಡೆದ ಬಾಂಬ್ ದಾಳಿ ವಿವರಗಳನ್ನು ಹಂಚಿಕೊಳ್ಳಲಾಯಿತು ಎಂದು ಡೈಲಿ ಟೈಮ್ಸ್ ವರದಿ ವಿವರಿಸಿದೆ.
ಕಾಬೂಲ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವುದಾಗಿಯೂ ಪಾಕ್ ಈ ಸಂದರ್ಭದಲ್ಲಿ ಭಾರತಕ್ಕೆ ಭರವಸೆ ನೀಡಿರುವುದಾಗಿ ವರದಿ ಹೇಳಿದೆ. |