ಭಾರತ ಮತ್ತು ಚೀನಗಳು ತಮ್ಮ ಗಡಿವಿವಾದವನ್ನು ಶೀಘ್ರ ಪರಿಹರಿಸಲು ಮುಂದಾಗಿದ್ದು, ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಚೀನ ಅಧ್ಯಕ್ಷ ಹು ಜಿಂತಾವೋ ತಮ್ಮ ವಿಶೇಷ ಪ್ರತಿನಿಧಿಗಳಿಗೆ ಚರ್ಚೆಗಳನ್ನು ತೀವ್ರಗೊಳಿಸುವಂತೆ ಸೂಚಿಸಲು ನಿರ್ಧರಿಸಿದ್ದಾರೆ. ಏಶ್ಯಾ-ಯೂರೋಪ್ ಶೃಂಗಸಭೆಯ ಪಾರ್ಶ್ವದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಮತ್ತು ದೀರ್ಘಕಾಲದಿಂದ ನನೆಗುದ್ದಿಗೆ ಬಿದ್ದಿರುವ ಗಡಿ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳುವ ಕುರಿತು ಪುನರುಚ್ಚರಿಸಿದರು.ಸಿಂಗ್ ಹಾಗೂ ಜಿಂತಾವೋ ನಡುವೆ ಬೀಜಿಂಗ್‌ನ 'ಗ್ರೇಟ್ ಹಾಲ್ ಆಫ್ ದಿ ಪೀಪಲ್'ನಲ್ಲಿ ಸುಮಾರು 50 ನಿಮಿಷಗಳ ಕಾಲ ನಡೆದ ಮಾತುಕತೆಯು 'ಅತ್ಯಂತ ಹಿತಕರ'ವಾಗಿತ್ತು ಎಂದು ಭಾರತೀಯ ರಾಜತಾಂತ್ರಿಕರು ವಿವರಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಧಾನಿ ಸಿಂಗ್ ಅವರು ಗಡಿಯಾಚೆಗಿನ ನದಿ ಸಮಸ್ಯೆಗಳಿಗೆ ದ್ವಿಪಕ್ಷೀಯ ಸಹಯೋಗದ ಅಗತ್ಯವಿದೆ ಎಂದು ಹೇಳಿದರೆಂದು ವಿದೇಶಾಂಗ ವ್ಯವಹಾರ ಸಚಿವಾಲಯದ ಉನ್ನತ ಅಧಿಕಾರಿ ತಿಳಿಸಿದ್ದಾರೆ. |
|