ಪಾಕಿಸ್ತಾನ ವಾಯುವ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭಾರೀ ಭೂಕಂಪದಲ್ಲಿ ಸುಮಾರು 160ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಏಕಾಏಕಿ ಸಂಭವಿಸಿದ ಭೂಕಂಪನದಿಂದಾಗಿ ಭೂಕುಸಿತ ಉಂಟಾಗಿದ್ದು, ನೂರಾರು ಮನೆಗಳು ಧ್ವಂಸಗೊಂಡಿದ್ದು, ವಿದ್ಯುತ್ ಸಂಪರ್ಕ್ ಕಡಿತಗೊಂಡಿದೆ.ಸ್ಥಳೀಯ ಸಮಯದ ಪ್ರಕಾರ ಮುಂಜಾವಿನ 4.33ಕ್ಕೆ 5.0 ಪ್ರಮಾಣದಲ್ಲಿ ಭೂಕಂಪನ ಉಂಟಾಗಿದ್ದರೆ, 5.10ರ ಸುಮಾರಿಗೆ ಮತ್ತೆ ಸಂಭವಿಸಿದ ಭೂಕಂಪನ 6.1ರ ಪ್ರಮಾಣದಷ್ಟು ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು.ಕ್ವೆಟ್ಟಾದಿಂದ 70ಕಿ.ಮೀ. ದೂರದಲ್ಲಿರುವ ಆಗ್ನೇಯ ಪ್ರಾಂತ್ಯ ಹಾಗೂ ಅಫ್ಘಾನ್‌ನ ಕಂದಾಹಾರ್ ನಗರದಿಂದ 185ಕಿ.ಮೀ. ದೂರದ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದಾಗ ಅಮೆರಿಕ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.ಈ ಭೂಕಂಪನದಿಂದ ಕ್ವೆಟ್ಟಾ, ಜಿಯಾರಾತ್, ಪಿಶಿನ್, ಕ್ವೈಲಾ ಅಬ್ದುಲ್ಲಾ, ಮಾಸ್ತುಂಗ್, ಸಿಬಿ, ಬೋಲಾನ್, ಕುಚ್‌ಲಾಕ್ ಮತ್ತು ಲೋರಾಲೈ ಪ್ರದೇಶಗಳಲ್ಲಿ ಹಾನಿ ಉಂಟಾಗಿದೆ.ಜಿಯಾರಾತ್ ಪ್ರದೇಶದಲ್ಲಿಯೇ ಹೆಚ್ಚಿನ ಹಾನಿ ಸಂಭವಿಸಿದ್ದು, ಸುಮಾರು 160ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದಾಗಿ ಜಿಲ್ಲಾ ಸಹಾಯಕ ಅಧಿಕಾರಿ ಸೊಹೈಲ್ ಉರ್ ರೆಹಮಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |
|