ಉತ್ತರ ಸೋಮಾಲಿಯಾದ ವಿಶ್ವಸಂಸ್ಥೆಯ ಕಟ್ಟಡದ ಮೇಲೆ ಆತ್ಮಾಹುತಿ ಬಾಂಬರ್ ದಳದ ಸದಸ್ಯರು ದಾಳಿ ನಡೆಸಿ ತಮ್ಮನ್ನು ತಾವು ಸ್ಫೋಟಿಸಿಕೊಂಡ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಕಚೇರಿಯ ಅಧಿಕಾರಿಗಳು ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶ್ವಸಂಸ್ಥೆ ಕಚೇರಿ, ಇಥಿಯೋಪಿಯಾ ರಾಯಭಾರಿ ಕಚೇರಿ ಮತ್ತು ರಾಷ್ಟ್ರಾಧ್ಯಕ್ಷರ ನಿವಾಸವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ಸದಸ್ಯರು ದಾಳಿ ನಡೆಸಿದ್ದಾರೆ. ಈಗಾಗಲೇ ಹಲವಾರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಸೋಮಾಲಿಯಾ ಸರಕಾರದ ವಕ್ತಾರ ಇಸ್ಮಾಯಿಲ್ ಅದಾನಿ ಹೇಳಿದ್ದಾರೆ.
ಆತ್ಮಾಹುತಿ ದಾಳಿಯಲ್ಲಿ ಸೋಮಾಲಿಲ್ಯಾಂಡ್‌ನ ಕಾರ್ಯದರ್ಶಿ ದಹಿರ್ ರಿಯಾಲೆ ಕಹೀನ್ ಮೃತರಾಗಿದ್ದು,ರಾಷ್ಟ್ರಾಧ್ಯಕ್ಷರು ದಾಳಿಯಿಂದ ಪಾರಾಗಿದ್ದಾರೆ ಎಂದು ಅದಾನಿ ಹೇಳಿದ್ದಾರೆ.
ದಾಳಿಯಲ್ಲಿ ಮೃತರಾದವರನ್ನು, ಗಾಯಾಳುಗಳನ್ನು ಗುರುತಿಸಲಾಗುತ್ತಿದ್ದು, ಆದರೆ ನಿಖರವಾಗಿ ಸಂಖ್ಯೆಯನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಕೀನ್ಯಾದ ನೈರೊಬಿಯಲ್ಲಿರುವ ಸೋಮಾಲಿಯಾ ಕಾರ್ಯಕ್ರಮದ ವಿಶ್ವಸಂಸ್ಥೆಯ ವಕ್ತಾರೆ ಡಾನ್ ಎಲಿಜಾಬೆತ್ ಬ್ಲಾಲಾಕ್ ಹೇಳಿದ್ದಾರೆ.
ವಿಶ್ವಸಂಸ್ಥೆ ಕಚೇರಿ, ಇಥಿಯೋಪಿಯಾ ರಾಯಭಾರಿ ಕಚೇರಿ ಮತ್ತು ರಾಷ್ಟ್ರಾಧ್ಯಕ್ಷರ ನಿವಾಸಗಳ ಮೇಲೆ ದಾಳಿ ನಡೆಸಿದ ಆತ್ಮಾಹುತಿ ತಂಡದ ಬಗ್ಗೆ ವಿವರಗಳು ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ. |