ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಗಡಿ ಪ್ರದೇಶವಾಗಿರುವ ವಾಯುವ್ಯ ಆದಿವಾಸಿ ಪ್ರದೇಶದಲ್ಲಿ ಉಗ್ರಗಾಮಿಗಳು ಬುಧವಾರದಂದು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ 100ಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕೆಲ ಸಮಯದ ಬಳಿಕ ಬಿಡುಗಡೆಗೊಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸುಮಾರು 10 ರಿಂದ 12 ಮಂದಿಯನ್ನೊಳಗೊಂಡಿದ್ದ ಬಂದೂಕುದಾರಿ ಉಗ್ರಗಾಮಿಗಳು ಮೊಹಮಂದ್ ಆದಿವಾಸಿ ಏಜೆನ್ಸಿಯ ದರ್ವಾಝ್ ಗೈ ಶಾಲೆಗೆ ಪ್ರವೇಶಿಸಿದ್ದರು. ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆಸಿದ ಉಗ್ರರು ಶಾಲೆಯನ್ನು ವಶಕ್ಕೆ ಪಡೆದು ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿದ್ದರು.
ಇದಾದ ಸ್ವಲ್ಪ ಸಮಯದ ನಂತರ ಉಗ್ರರು ಶಾಲಾ ಮಕ್ಕಳನ್ನು ಬಿಡುಗಡೆಗೊಳಿಸಿದ್ದಾರೆಂದು ದೂರದರ್ಶನ ವಾಹಿನಿಗಳಿಗೆ ವರದಿ ತಿಳಿಸಿದೆ. ಆದರೆ ಉಗ್ರರು ತಕ್ಷಣ ಮಕ್ಕಳನ್ನು ಬಿಡುಗಡೆಗೊಳಿಸಿದರ ಹಿಂದಿನ ಕಾರಣವೇನೆಂದು ತಿಳಿಯಲಾಗಲಿಲ್ಲ.
ಶಾಲಾ ಮಕ್ಕಳು ಕಟ್ಟಡದಿಂದ ಹೊರಬಂದ ನಂತರ ಭದ್ರತಾ ಪಡೆ ಸಿಬ್ಬಂದಿಗಳು ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿಯು ನಡೆಯಿತು. ತಾಲಿಬಾನ್ ಉಗ್ರರನ್ನು ಹಿಮ್ಮೆಟ್ಟಿಸಲು ಭದ್ರತಾ ಪಡೆಗಳಿಗೆ ಸಣ್ಣ ಫಿರಂಗಿಗಳನ್ನು ಉಪಯೋಗಿಸ ಬೇಕಾಯಿತು.
ಮೊಹಮಂದ್ ಏಜೆನ್ಸಿಯ ಸಮೀಪದ ಪ್ರದೇಶವಾದ ಬಜೌರ್ ಆದಿವಾಸಿ ಏಜೆನ್ಸಿ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಭದ್ರತಾ ಪಡೆಗಳ ಕಾರ್ಯಾಚರಣೆಯಿಂದಾಗಿ ಅಲ್ಲಿನ ಜನರು ಆತಂಕಕ್ಕಿಡಾಗಿದ್ದಾರೆ.
ಬಜೌರ್ ಪ್ರದೇಶದಲ್ಲಿ 1,500ಕ್ಕಿಂತ ಹೆಚ್ಚು ಉಗ್ರವಾದಿಗಳು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ವರದಿಗಳ ಪ್ರಕಾರ ಬಜೌರ್ ಪ್ರದೇಶದಲ್ಲಿದ್ದ ತಾಲಿಬಾನ್ ಉಗ್ರರು ಸಮೀಪದ ಪ್ರದೇಶವಾದ ಮೊಹಮಂದ್ ಏಜೆನ್ಸಿಯತ್ತ ಪಲಾಯನ ಮೂಡಿದ್ದಾರೆ.
ಮೊಹಮಂದ್ ಪ್ರದೇಶದಲ್ಲಿ ಭದ್ರತಾ ಪಡೆಯ ಚೆಕ್‌ಪೋಸ್ಟ್‌ಗಳಿಗೆ ತಾಲಿಬಾನ್ ಉಗ್ರಗಾಮಿಗಳು ಆತ್ಮಾಹುತಿ ದಾಳಿಯನ್ನು ನಡೆಸಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿತ್ತು. ಬುಧವಾರದ ಕಾರ್ಯಾಚರಣೆಯಲ್ಲಿ ನಾಲ್ಕು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ. |