ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದು, ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ತಾಪಮಾನ ಬದಲಾವಣೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾನ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಮಂತ್ರಿ ಮನಮೋಹನ್ ಸಿಂಗ್, ವಿದೇಶಾಂಗ ವ್ಯವಹಾರ ಸಚಿವ ಪ್ರಣವ್ ಮುಖರ್ಜಿ, ಯುಪಿಎ ಅಧ್ಯಕ್ಷೆ ಸೋನಿಯ ಗಾಂಧಿ ಮತ್ತು ಪ್ರತಿಪಕ್ಷದ ನಾಯಕ ಆಡ್ವಾಣಿ ಅವರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಲಿದ್ದಾರೆ.
ಭಾರತೀಯ ನಾಯಕರ ಜತೆ ಮಾತುಕತೆಯಲ್ಲಿ ಪ್ರಸಕ್ತ ಜಾಗತಿಕ ಬಿಕ್ಕಟ್ಟು ಪ್ರಧಾನ ವಿಷಯವಾಗಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ವಿತ್ತೀಯ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಿ ಇಂತಹ ಆರ್ಥಿಕ ಬಿಕ್ಕಟ್ಟು ಮರುಕಳಿಸದಂತೆ ಮಾರ್ಗೋಪಾಯಗಳನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.
ಬಹುತೇಕ ರಾಷ್ಟ್ರಗಳನ್ನು ಕಾಡಿರುವ ಆರ್ಥಿಕ ಕುಸಿತ ಕುರಿತು ಚರ್ಚಿಸಲು ಅಮೆರಿಕ ಕರೆದಿರುವ ವಿಶ್ವನಾಯಕರ ಸಭೆಗೆ ಮುನ್ನ ಈ ಭೇಟಿ ನಡೆಯುತ್ತಿರುವುದು ಮಹತ್ವಪಡೆದಿದೆ. ಚರ್ಚೆಯಲ್ಲಿ ಜಾಗತಿಕ ತಾಪಮಾನದ ವಿಷಯ ಕೂಡ ಪ್ರಮುಖವಾಗಿ ಚರ್ಚೆಯಾಗುವುದೆಂದು ನಿರೀಕ್ಷಿಸಲಾಗಿದೆ. |