ಅಫಘಾನಿಸ್ತಾನ ಸರಕಾರ ತಾಲಿಬಾನ್ ಉಗ್ರರೊಂದಿಗೆ ಮನಸ್ತಾಪ ಬಗೆಹರಿಸಿಕೊಳ್ಳಲು ಅಮೆರಿಕ ಬೆಂಬಲ ನೀಡುತ್ತಿದ್ದರೂ ಆಲ್‌ಕೈದಾ ನಾಯಕ ಒಸಮಾ ಬಿನ್ ಲಾಡೆನ್ ಬೆಂಬಲಿಗ ಮುಲ್ಲಾ ಮೊಹಮ್ಮದ್ ಉಮರ್‌ನೊಂದಿಗೆ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಪೆಂಟಾಗಾನ್ ವಕ್ತಾರರು ಹೇಳಿದ್ದಾರೆ.
ಕುಖ್ಯಾತ ನಾಯಕ ಲಾಡೆನ್ ಕಟ್ಟಾ ಬೆಂಬಲಿಗ ಮುಲ್ಲಾ ಉಮರ್ ಸಾವಿರಾರು ಅಮೆರಿಕನ್ ಸೈನಿಕರನ್ನು ಹತ್ಯೆ ಮಾಡಿದ್ದರಿಂದ ಉಮರ್‌ನೊಂದಿಗಾಗಲಿ, ಆಲ್‌ಕೈದಾದೊಂದಿಗಾಗಲಿ ರಾಜಿ ಸಾಧ್ಯವಿಲ್ಲ ಎಂದು ಪೆಂಟಾಗಾನ್ ತಿಳಿಸಿದೆ.
2001ರ ಸೆಪ್ಟೆಂಬರ್ 11 ರಂದು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ದಾಳಿಯ ನಂತರ ಒಸಾಮಾ ಬಿನ್ ಲಾಡೆನ್ ಪರಾರಿಯಾಗುವಲ್ಲಿ ಸಹಕಾರಿಯಾಗಿದ್ದು, ಪ್ರಸ್ತುತ ಅಲ್‌ಕೈದಾದ ಪ್ರಮುಖ ಮುಖಂಡನಾಗಿದ್ದಾನೆ ಎಂದು ಅಮೆರಿಕ ಆರೋಪಿಸಿದೆ.
ಅಫಘಾನ್ ಅಧ್ಯಕ್ಷ ಹಮೀದ್ ಕರ್ಝಾಯಿ, ದೇಶದಲ್ಲಿ ಹೆಚ್ಚುತ್ತಿರುವ ಸರಕಾರ ವಿರೋಧಿ ಧೋರಣೆ ಹಾಗೂ ಹಿಂಸಾಚಾರದಿಂದಾಗಿ ಸೌದಿ ಅರೇಬಿಯಾದ ಮಧ್ಯಸ್ಥಿಕೆಯಲ್ಲಿ ತಾಲಿಬಾನ್ ಉಗ್ರರೊಂದಿಗೆ ರಾಜಿ ಯತ್ನ ಮುಂದುವರಿಸಿದ್ದಾರೆ ಎಂದು ಅಫಘಾನ್ ಅಧಿಕಾರಿಗಳು ತಿಳಿಸಿದ್ದಾರೆ
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸೌದಿ ಅರೇಬಿಯಾದ ಮಧ್ಯಸ್ಥಿಕೆಯಲ್ಲಿ ತಾಲಿಬಾನ್ ನಾಯಕರೊಂದಿಗೆ ಅಧ್ಯಕ್ಷ ಹಮೀದ್ ಕರ್ಝಾಯಿ ಸಹೋದರ ಖಯ್ಯೂಮ್ ಕರ್ಝಾಯಿ ಅಫಘಾನ್ ನಿಯೋಗದೊಂದಿಗೆ ಮಾತುಕತೆ ನಡೆಸಿದ್ದರು ಎಂದು ಪೆಂಟೆಗಾನ್ ಮೂಲಗಳು ತಿಳಿಸಿವೆ. |