ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೆಜ್ ಮುಷರಫ್ ರಾಜಕೀಯ ಪ್ರವೇಶಿಸುವ ಆಸಕ್ತಿ ಹೊಂದಿದ್ದಾರೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ , ಪಾಕಿಸ್ತಾನ್ ಮುಸ್ಲಿಂ ಲೀಗ್ (ಕೈದ್) ಪಕ್ಷದ ನಾಯಕರು ಮುಷರಫ್ ಅವರನ್ನು ನಿವಾಸದಲ್ಲಿ ಭೇಟಿ ಮಾಡಿದಾಗ ರಾಜಕೀಯ ಸೇರಲು ಇನ್ನು ಕಾಲ ಪಕ್ವವಾಗಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ನಾನು ಮತ್ತು ನನ್ನ ಕುಟುಂಬ, ಪ್ರಸಕ್ತ ಸ್ಥಿತಿಯಲ್ಲಿ ಸಧ್ಯಕ್ಕೆ ರಾಜಕೀಯ ಪ್ರವೇಶಿಸುವ ಬಗ್ಗೆ ಯೋಚಿಸಿಲ್ಲ ಎಂದು ಪಿಎಂಎಲ್ (ಕ್ಯೂ) ಪಕ್ಷದ ನಾಯಕರಾದ ಶೌಜಾತ್ ಹುಸೇನ್ , ಪರ್ವೇಜ್ ಇಲಾಹಿ ಮತ್ತು ವಜಾಹತ್ ಹುಸೇನ್ ಅವರಿಗೆ ಮುಷರಫ್ ತಿಳಿಸಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನ್ ಮುಸ್ಲಿಂ ಲೀಗ್ (ಕೈದ್) ಪಕ್ಷ ದೇಶದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತಂತೆ ಮುಷರಫ್ ಅವರೊಂದಿಗೆ ಚರ್ಚಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದಲ್ಲಿನ ನಾಯಕತ್ವ ಬದಲಾವಣೆ ಪ್ರಸ್ತುತ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ಸ್ಥಿತಿಗತಿ ಬಗ್ಗೆ ವಿಸ್ತರಿತವಾಗಿ ಚರ್ಚಿಸಿದ್ದು ದೇಶವನ್ನು ಆರ್ಥಿಕ ಬಿಕ್ಕಟ್ಟುಗಳಿಂದ ಪಾರು ಮಾಡಲು ಪಕ್ಷದ ನಾಯಕರು ಶ್ರಮಿಸಬೇಕು ಎಂದು ಮುಷರಫ್ ಸಲಹೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ಫೆಬ್ರವರಿ ಚುನಾವಣೆಯಲ್ಲಿ ತಾವು ಬೆಂಬಲಿಸಿದ ಪಿಎಂಎಲ್ (ಕ್ಯೂ) ಪಕ್ಷದ ನಾಯಕತ್ವ ವಹಿಸಲು ಬಯಸುವುದಾಗಿ ಲಾಹೋರ್‌ನಲ್ಲಿ ಖಾಸಗಿ ಗೆಳೆಯರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ. |