ಅಮೆರಿಕ ಗಡಿಯಾಚೆಗಿನ ಪಾಕ್ ಆದಿವಾಸಿ ಪ್ರದೇಶಗಳ ಮೇಲೆ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ತತ್‌ಕ್ಷಣ ನಿಲ್ಲಿಸಬೇಕು, ಇಲ್ಲದಿದ್ದರೆ ಪಾಕಿಸ್ತಾನದಲ್ಲಿ ಅಮೆರಿಕ ವಿರೋಧಿ ಭಾವನೆಗಳು ತೀವ್ರಗೊಳ್ಳಲಿದೆಯೆಂದು ಪಾಕಿಸ್ತಾನ ಅಮೆರಿಕಕ್ಕೆ ಮುನ್ನೆಚ್ಚರಿಕೆ ನೀಡಿದೆ.
ಅಫ್ಘಾನ್ ಗಡಿಯೊಳಗಿನಿಂದ ಪಾಕ್ ಗಡಿ ಪ್ರದೇಶದೊಳಗೆ ಅಮೆರಿಕ ಸೈನ್ಯವು ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ತತ್‌ಕ್ಷಣ ನಿಲ್ಲಿಸಬೇಕೆಂದು ಪಾಕ್ ಭೇಟಿಯಲ್ಲಿರುವ ಅಮೆರಿಕ ಸೈನ್ಯದ ಇರಾಕ್ ಮತ್ತು ಅಫ್ಘಾನಿಸ್ಥಾನದ ಮೇಲ್ವಿಚಾರಣೆಯನ್ನು ನೋಡುತ್ತಿರುವ ಯುಸ್ ಮಿಲಿಟರಿ ಕಮಾಂಡರ್ ಜನರಲ್ ಡೇವಿಡ್ ಎಚ್ ಪೆಟ್ರೋಸ್ ಬಳಿ ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಮುಖಂಡರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಅಮೆರಿಕ ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥನಾಗಿ ನೇಮಕಗೊಂಡಿರುವ ಬಳಿಕ ತನ್ನ ಮೊದಲ ವಿದೇಶ ಭೇಟಿಯಲ್ಲಿರುವ ಪೆಟ್ರೋಸ್ ಮತ್ತು ವಿದೇಶಾಂಗ ಸಹಾಯಕ ಕಾರ್ಯದರ್ಶಿ ರಿಚರ್ಡ್ ಎ ಬುಚರ್ ಭಾನುವಾರದಂದು ಪಾಕಿಸ್ತಾನಕ್ಕೆ ಆಗಮಿಸಿದ್ದಾರೆ.
ಅಮೆರಿಕ ಅಧಿಕಾರಿಗಳೊಂದಿಗಿನ ಭೇಟಿಯ ವೇಳೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರು ಅಮೆರಿಕಾ ಸೈನ್ಯದ ಪಾಕಿಸ್ಥಾನದ ಆದಿವಾಸಿ ಪ್ರದೇಶದ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ ಮತ್ತು ಕ್ಷಿಪಣಿ ದಾಳಿಯನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿರುವುದಾಗಿ ದೂರದರ್ಶನ ವಾಹಿನಿಗಳು ವರದಿ ಮಾಡಿವೆ. |