ಅಮೆರಿಕ ಅಧ್ಯಕ್ಷಗಾದಿ ಚುನಾವಣಾ ಹಣಾಹಣಿಯಲ್ಲಿ ಬರಾಕ್ ಒಬಾಮ ಮತ್ತು ಜಾನ್ ಮೆಕೇನ್ ಅನ್ನು ಮಾತ್ರ ಮಾಧ್ಯಮಗಳು ಪ್ರಮುಖವಾಗಿ ಬಿಂಬಿಸುತ್ತಿವೆ, ಆದರೆ ಅಧ್ಯಕ್ಷ ಪಟ್ಟ ಅಲಂಕರಿಸಲು ಕೇವಲ ಇವರಿಬ್ಬರು ಮಾತ್ರ ಸ್ಪರ್ಧಿಗಳಲ್ಲ, ಇನ್ನೂ 255 ಮಂದಿ ಅಖಾಡದಲ್ಲಿದ್ದಾರೆ !
ಡೆಮೋಕ್ರೆಟಿಕ್, ರಿಪಬ್ಲಿಕನ್ ಪಕ್ಷಗಳು ಸೇರಿದಂತೆ ಉಳಿದ ಸಣ್ಣ-ಪುಟ್ಟ ಪಕ್ಷಗಳಾದ ಸೋಶಿಯಲಿಸ್ಟ್ ಪಕ್ಷ,ಲಿಬರೇಷನ್ ಪಕ್ಷ, ಗ್ರೀನ್ ಪಕ್ಷ ಮತ್ತು ರಿಫೋರ್ಮ್ ಪಕ್ಷಗಳು ಒಳಗೊಂಡಂತೆ 255ಮಂದಿ ಕಣದಲ್ಲಿದ್ದಾರೆ ಎಂದು ಅಮೆರಿಕ ಚುನಾವಣಾ ಆಯೋಗ ಅಭ್ಯರ್ಥಿಗಳ ಪಟ್ಟಿಯಲ್ಲಿ ತಿಳಿಸಿದೆ.
ಅಧ್ಯಕ್ಷಗಾದಿ ಸ್ಪರ್ಧೆಯಲ್ಲಿರುವ ಪ್ಯಾಸಿಫಸ್ಟ್ ಪಕ್ಷದ ಅಭ್ಯರ್ಥಿ ಬ್ರಾಡ್‌ಫೋರ್ಡ್ ಲೈಟ್ಲೆ ಅವರು, ಇರಾಕ್‌ನಲ್ಲಿರುವ ಅಮೆರಿಕ ಸೈನ್ಯವನ್ನು ಹಿಂತೆಗೆಯುವುದು, ರಕ್ಷಣಾ ಖರ್ಚು-ವೆಚ್ಚ ಗಳನ್ನು ಕಡಿತ ಸೇರಿದಂತೆ ಹಲವಾರು ಭರವಸೆ ನೀಡಿದ್ದಾರೆ.
ಅದರಂತೆ ಮತ್ತೊಬ್ಬ ಅಭ್ಯರ್ಥಿ ನ್ಯಾಷನಲ್ ಸೋಶಿಯಲಿಸ್ಟ್ ಮೂವ್‌ಮೆಂಟ್‌ನ ಜಾನ್ ಟೈಲರ್ ಬೌಲ್ಸ್ ಕೂಡ, ಉಚಿತ ಆರೋಗ್ಯ ಕೇಂದ್ರಗಳು, ಪೂರ್ಣ ಪ್ರಮಾಣದಲ್ಲಿ ಉದ್ಯೋಗ ಮತ್ತು ಬಿಳಿಯೇತರ ಜನಾಂಗದವರಿಗೆ ಪುನರ್ವಸತಿ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.
ಹೀಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬ್ಬೊಬ್ಬ ಪಕ್ಷದವರು ಒಂದೊಂದು ರೀತಿಯಲ್ಲಿ ಅಮೆರಿಕ ಜನತೆಗೆ ಭರವಸೆ ನೀಡಿದ್ದಾರೆ. ಇಂದು ಮಹಾ ಮತದಾನ ನಡೆಯುತ್ತಿದ್ದು, ಪ್ರಪಂಚ ದ ಮಹಾನ್ ಪ್ರಜಾಪ್ರಭುತ್ವವಾದಿ ದೇಶದ ಅಧ್ಯಕ್ಷ ಪಟ್ಟವನ್ನು ಯಾರು ಅಲಂಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. |