ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ವೇತಭವನಕ್ಕೆ ಕರಿಯ ಅಧ್ಯಕ್ಷ: ಹಾಲಿವುಡ್‌ನಿಂದ ವಾಸ್ತವಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ವೇತಭವನಕ್ಕೆ ಕರಿಯ ಅಧ್ಯಕ್ಷ: ಹಾಲಿವುಡ್‌ನಿಂದ ವಾಸ್ತವಕ್ಕೆ
ND
ಅಮೆರಿಕಕ್ಕೊಬ್ಬ ಕರಿಯ ಜನಾಂಗೀಯ ಅಧ್ಯಕ್ಷ, ಇದುವರೆಗೂ ಕೇವಲ ಹಾಲಿವುಡ್‌ನ ರೀಲುಗಳಲ್ಲಷ್ಟೇ ಸರಿದಾಡುತ್ತಿದ್ದ ಇಂಥದ್ದೊಂದು ಕಲ್ಪನೆ ಈಗ ನಿಜ ಜೀವನದಲ್ಲೂ ಪ್ರತಿಫಲಿಸಿದೆ. ಆಫ್ರಿಕಾ ಮೂಲದ ಅಮೆರಿಕನ್ ಅಧ್ಯಕ್ಷರಾಗಿ ಬರಾಕ್ ಒಬಾಮ ಅವರು ಶ್ವೇತಭವನ ಪ್ರವೇಶಿಸಲು ಸಜ್ಜಾಗಿದ್ದಾರೆ.

ಕರಿಯ ಅಧ್ಯಕ್ಷನೊಬ್ಬ ಶ್ವೇತಭವನದಲ್ಲಿ ರಾರಾಜಿಸುವ ಕಲ್ಪನೆಯು 20ನೇ ಶತಮಾನದ ಅಂತ್ಯಭಾಗದ ಹಾಲಿವುಡ್ ಚಿತ್ರಗಳಲ್ಲಿ ಕಂಡುಬಂದಿದ್ದವು ಎಂಬುದು ಗಮನಾರ್ಹ ಸಂಗತಿ. 1972ರಲ್ಲಿ ಬಿಡುಗಡೆಯಾದ 'ದಿ ಮ್ಯಾನ್' ಕಥೆಯ ಪ್ರಕಾರ, ಅಧ್ಯಕ್ಷ ಮತ್ತು ಸದನದ ಸ್ಪೀಕರ್ ಇಬ್ಬರೂ ಕಟ್ಟಡ ಕುಸಿತ ದುರ್ಘಟನೆಯೊಂದರಲ್ಲಿ ಮೃತಪಟ್ಟಾಗ, ಉಪಾಧ್ಯಕ್ಷ ಅನಾರೋಗ್ಯ ಕಾರಣ ಮುಂದಿಟ್ಟು ಆ ಹುದ್ದೆಯೇರಲು ನಿರಾಕರಿಸುತ್ತಾನೆ. ಆಗ ಸೆನೆಟ್ ಅಧ್ಯಕ್ಷ ಡಗ್ಲಾಸ್ ದಿಲ್ಮನ್ (ನಟ-ಜೇಮ್ಸ್ ಅರ್ಲ್ ಜೋನ್ಸ್) ಅವರು ಮೊದಲ ಕರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಯೊಂದಿಗೆ ಅಂಡಾಕಾರದ ಶ್ವೇತಭವನ ಕಚೇರಿಯನ್ನು ಪ್ರವೇಶಿಸುತ್ತಾರೆ.

1998ರಲ್ಲಿ ತೆರೆ ಕಂಡ ವಿಜ್ಞಾನ-ಸಮಕಾಲೀನ ದುರಂತ ಕಥೆಯುಳ್ಳ ಚಿತ್ರ 'ಡೀಪ್ ಇಂಪ್ಯಾಕ್ಟ್'ನಲ್ಲಿ, ಅಮೆರಿಕದ ಕರಿಯ ಜನಾಂಗೀಯ ಅಧ್ಯಕ್ಷ ಟಾಮ್ ಬೆಕ್ (ನಟ-ಮೋರ್ಗನ್ ಫ್ರೀಮನ್) ಭೂಮಿಗೆ ಅಪ್ಪಳಿಸಿ ಪ್ರಳಯಕ್ಕೆ ಕಾರಣವಾಗಬಹುದಾಗಿದ್ದ ವೂಲ್ಫ್-ಬೈಡರ್‌ಮ್ಯಾನ್ ಎಂಬ ಕಾಲ್ಪನಿಕ ಧೂಮಕೇತುವನ್ನು ನಾಶಪಡಿಸುವ ಕಥೆಯಿದೆ.

ತೀವ್ರ ಬಿಕ್ಕಟ್ಟಿನಿಂದ ವಿಚಲಿತಗೊಂಡ ಅಧ್ಯಕ್ಷ ಬೆಕ್, ಈ ಬೆದರಿಕೆಯನ್ನು ಜನರಿಗೆ ಬಹಿರಂಗಪಡಿಸುತ್ತಾನೆ ಮತ್ತು ಕಳವಳಕಾರಿ ಸಂಗತಿಗಳನ್ನೂ ಬಿಡಿಸಿಡುತ್ತಾನೆ - ಧೂಮಕೇತುವು ಭೂಮಿಯನ್ನು ನಾಶಪಡಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಏಳು ಮೈಲಿ ಅಗಲವಿದೆ ಎನ್ನುತ್ತಾನೆ. ಈ ಧೂಮಕೇತುವನ್ನು ಅಣ್ವಸ್ತ್ರ ಪ್ರಯೋಗಿಸಿ ನಾಶಪಡಿಸಲು ಅಮೆರಿಕ ಮತ್ತು ರಷ್ಯಾಗಳು ವ್ಯೋಮ ನೌಕೆಯಲ್ಲಿ ಸಿಬ್ಬಂದಿಯನ್ನು ಕಳುಹಿಸುತ್ತವೆ. ಈ ಸಂದರ್ಭ ದೇಶದ ಜನತೆಯನ್ನು ಭಾರಿ ನಿರ್ಬಂಧ, ಬೆಲೆ ಏರಿಕೆ ಇತ್ಯಾದಿ ಕಾಡುತ್ತದೆ. ಕೊನೆಗೆ, ಧೂಮಕೇತು ನಾಶವಾಗುತ್ತದೆ, ಬೆಕ್ ಅಮೆರಿಕ ಜನತೆಯ ಹೃದಯ ಗೆಲ್ಲುತ್ತಾನೆ.

ಐದು ವರ್ಷಗಳ ಹಿಂದೆ, 2003ರ ಕಾಮಿಡಿ ಚಲನಚಿತ್ರ 'ಹೆಡ್ ಆಫ್ ಸ್ಟೇಟ್'ನಲ್ಲಿ, ನಟ ಕ್ರಿಸ್ ರಾಕ್ ಅವರು ಮೇಸ್ ಗಿಲಿಯಂನ ಪಾತ್ರ ಮಾಡಿದ್ದರು. ಇದರಲ್ಲಿ, ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅಭ್ಯರ್ಥಿಗಳು ವಿಮಾನ ದುರಂತದಲ್ಲಿ ಮಡಿದಾಗ ಮೇಸ್ ಗಿಲಿಯಂ ಆಶ್ಚರ್ಯಕರವಾಗಿ ಅಧ್ಯಕ್ಷೀಯ ಅಭ್ಯರ್ಥಿಯಾಗುತ್ತಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಾ ಭೂಕುಸಿತ: ಸಾವಿನ ಸಂಖ್ಯೆ 40
ಅಮೆರಿಕ ಜನತೆಗೆ ಸಂದ ಗೆಲುವು: ಒಮಾಮ
ಅಧ್ಯಕ್ಷ ಪಟ್ಟ: ಒಬಾಮ ಜಯಭೇರಿ
ಪಾಕ್: ಆತ್ಮಾಹುತಿ ದಾಳಿಗೆ ಸೈನಿಕ ಬಲಿ
ಅಮೆರಿಕದಲ್ಲಿ ಗದಗ ಸಾಫ್ಟವೇರ್ ಎಂಜೀನಿಯರ್ ಹತ್ಯೆ
ಕಾಶ್ಮೀರಿ ಬಿಕ್ಕಟ್ಟು ಇತ್ಯರ್ಥಕ್ಕೆ ಭಾರತ-ಪಾಕ್ ಸಮರ್ಥ: ವಿಶ್ವಸಂಸ್ಥೆ