ಅಮೆರಿಕದ ಉಪಾಧ್ಯಕ್ಷ ಪಟ್ಟವನ್ನು ವಿದೇಶಾಂಗ ನೀತಿಯ ಹಿರಿಯ ತಜ್ಞ, ಹಿರಿಯ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜೋ ಬಿಡೆನ್ ಅವರನ್ನು ಆಯ್ಕೆ ಮಾಡಲಾಗಿದೆ.
ಬುಧವಾರ ಅಮೆರಿಕದ ಅಧ್ಯಕ್ಷೀಯ ಮಹಾ ಚುನಾವಣೆಯಲ್ಲಿ ಡೆಮೋಕ್ರೆಟಿಕ್‌ನ ಬರಾಕ್ ಒಬಾಮ ಅವರು ಜಯಭೇರಿ ಗಳಿಸಿದ ಬೆನ್ನಲ್ಲೇ, ಉಪಾಧ್ಯಕ್ಷರನ್ನಾಗಿ ಬಿಡೆನ್ ಅವರ ಹೆಸರನ್ನು ಘೋಷಿಸಲಾಗಿದೆ.
ಬಿಡೆನ್ ಅವರು ವಿದೇಶಾಂಗ ವ್ಯವಹಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಭಾರತ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದಲ್ಲಿ ಬಿಡೆನ್ ಅವರ ಮಹತ್ತರವಾದ ಪಾತ್ರವನ್ನು ವಹಿಸಿದ್ದರು.
65ರ ಹರೆಯದ ಹಿರಿಯ ಸೆನೆಟರ್ ಬಿಡೆನ್ ಅವರು ಸೆನೆಟ್‌ನ ನ್ಯಾಯಾಂಗ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಡ್ರಗ್ ಪಾಲಿಸಿ, ಅಪರಾಧ ತಡೆ, ನಾಗರಿಕ ಸ್ವಾತಂತ್ರ್ಯಗಳ ವಿವಾದಗಳ ಬಗೆಹರಿವಿಕೆಯಲ್ಲೂ ಮುಂಚೂಣಿಯಲ್ಲಿದ್ದರು.
ಬುಷ್ ಆಡಳಿತ ವಿದೇಶಾಂಗ ನೀತಿಯನ್ನು ಬಲವಾಗಿ ಖಂಡಿಸಿರುವ ಬಿಡೆನ್ ಅವರು ವಿದೇಶಾಂಗ ನೀತಿಯ ತಜ್ಞರಾಗಿದ್ದಾರೆ. ಇವರು 1972ರಲ್ಲಿ ಪ್ರಪ್ರಥಮವಾಗಿ ಸೆನೆಟ್‌ಗೆ ಆಯ್ಕೆಯಾಗಿದ್ದರು. ಬಿಡೆನ್ 1978, 1984, 1990, 1996 ಮತ್ತು 2002ರಲ್ಲಿ ಸತತವಾಗಿ ಪುನರಾಯ್ಕೆಗೊಂಡಿದ್ದರು. |