ಪ್ರಪ್ರಥಮ ಬಾರಿಗೆ ಶ್ವೇತಭವನ ಪ್ರವೇಶಿಸಿದ ಕಪ್ಪು ಜನಾಂಗದ ಬರಾಕ್ ಒಬಾಮ ಅವರನ್ನು ಹಾಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು ಅಭಿನಂದನೆ ಸಲ್ಲಿಸಿದ್ದು, ಜಗತ್ತಿನಾದ್ಯಂತ ಹಲವಾರು ಗಣ್ಯರು ಒಬಾಮಗೆ ಅಭಿನಂದನೆ ಸುರಿಮಳೆಗೈದಿದ್ದಾರೆ.
ಬುಷ್ ಅವರು, ಒಬಾಮ ಗೆಲುವಿಗೆ ದೂರವಾಣಿ ಮೂಲಕ ಶುಭ ಹಾರೈಸಿರುವುದಾಗಿ ಶ್ವೇತಭವನದ ವಕ್ತಾರ ಡಾನಾ ಪೆರಿನೋ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಲ್ಲದೇ ಒಬಾಮ ಹಾಗೂ ಅವರ ಕುಟುಂಬ ವರ್ಗವನ್ನೂ ತಾನು ಆತ್ಮೀಯವಾಗಿ ಶ್ವೇತಭವಕ್ಕೆ ಆಹ್ವಾನಿಸುವುದಾಗಿ ಹೇಳಿದ್ದಾರೆ.
ಅಮೆರಿಕದ 44ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ 47ರ ಹರೆಯದ ಒಬಾಮಗೆ ಪ್ರಪಂಚದ ನಾನಾ ಗಣ್ಯ ವ್ಯಕ್ತಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ನಿಕೋಲಸ್ ಸರ್ಕೋಜಿ: ಒಬಾಮ ಗೆಲುವಿಗೆ ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಅಭಿನಂದನೆ ಸಲ್ಲಿಸಿದ್ದು, ಬರಾಕ್ ಅವರ ಮುಂದೆ ಬಹಳಷ್ಟು ಸವಾಲುಗಳಿದ್ದು, ಅವುಗಳೆನ್ನೆಲ್ಲಾ ಎದುರಿಸುವ ಮೂಲಕ ಉತ್ತಮ ಆಡಳಿತವನ್ನು ನೀಡುವ ಜವಾಬ್ದಾರಿ ಬರಾಕ್ ಮೇಲಿದೆ. ಬರಾಕ್ ಗೆಲುವಿನಿಂದ ಫ್ರಾನ್ಸ್,ಯುರೋಪ್ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಮೀದ್ ಕರ್ಜಾಯ್: ಅಮೆರಿಕದ ಜನತೆ ಮಹತ್ತರವಾದ ನಿರ್ಧಾರ ಕೈಗೊಂಡಿರುವುದು ಇದರಿಂದ ಸಾಬೀತಾಗಿದೆ ಎಂದು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ತಿಳಿಸಿದ್ದು, ಒಬಾಮಗೆ ಶುಭ ಹಾರೈಸಿದ್ದಾರೆ. ಒಬಾಮ ಗೆಲುವಿನಿಂದ ಅಮೆರಿಕ ನೂತನ ಆಡಳಿತ ಕಾಣಲಿದೆ ಎಂಬ ಭರವಸೆ ಹೊಂದಿರುವುದಾಗಿ ಹೇಳಿದರು.
ಮೌಯ್ ಕಿಬಾಕಿ: ಒಬಾಮ ಗೆಲುವು ಇಡೀ ವಿಶ್ವಕ್ಕೆ ಸ್ಫೂರ್ತಿ ತಂದಿರುವುದಾಗಿ ಕೀನ್ಯಾ ಅಧ್ಯಕ್ಷ ಮೌಯ್ ಕಿಬಾಕಿ ಬಣ್ಣಿಸಿದ್ದಾರೆ. ಅಲ್ಲದೇ ವಿಶೇಷವಾಗಿ ಕೀನ್ಯಾಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.
ಜಪಾನ್: ಒಬಾಮ ಗೆಲುವಿನಿಂದ ಮುಂದಿನ ದಿನಗಳಲ್ಲಿ ಅಮೆರಿಕ ಜಪಾನ್ ಬಾಂಧವ್ಯ ಮತ್ತಷ್ಟು ಸದೃಢವಾಗಲಿದೆ ಎಂದು ಜಪಾನ್ ಪ್ರಧಾನಿ ತಾರೋ ಅಸೋ ಹೇಳಿದ್ದಾರೆ.
ಭಾರತ: ಬರಾಕ್ ಅವರ ಜಯ ಭಾರತಕ್ಕೆ ಮತ್ತಷ್ಟು ಅನುಕೂಲವಾಗಲಿದ್ದು, ಭವಿಷ್ಯದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಸಲು ಸಹಾಯಕವಾಗಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ. |