ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾಯಿತರಾದ ಬರಾಕ್ ಒಬಾಮ ಯುಸ್ ಹಾಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಕುಸಿತ ಮತ್ತು ಇರಾಕ್ ಸಮಸ್ಯೆಯ ಬಗ್ಗೆ ಚರ್ಚೆಯನ್ನು ನಡೆಸಲಿದ್ದಾರೆಂದು ಅಧಿಕಾರಿ ಮೂಲಗಳು ತಿಳಿಸಿವೆ.
ಸೋಮವಾರದಂದು ಒಬಾಮ ಹಾಗೂ ಪತ್ನಿ ಮಿಚೆಲ್ಲೆ ಜೊತೆಗೆ ಶ್ವೇತ ಭವನಕ್ಕೆ ಭೇಟಿ ನೀಡಲಿದ್ದಾರೆ. 2009 ಜನವರಿ 20ರಂದು ಅಧಿಕಾರವನ್ನು ಸ್ವೀಕರಿಸುವ ಮೂಲಕ ಶ್ವೇತಭವನ ಒಬಾಮರ ಅಧಿಕೃತ ಬಂಗಾಲೆಯಾಗಲಿದೆ ಎಂದು ಶ್ವೇತಭವನ ವಕ್ತಾರ ಡಾನಾ ಪೆರಿನೊ ಹೇಳಿದರು.
ಭೇಟಿಯ ವೇಳೆ ಬುಶ್ ಅಮೆರಿಕ ಅಧ್ಯಕ್ಷೀಯದ ಪದವಿಗೆ ಚುನಾಯಿತರಾದ ಒಬಾಮ ಅವರನ್ನು ಅಭಿನಂದಿಸಲಿದ್ದಾರೆ. ಇದಾದ ನಂತರ ಶ್ವೇತಭವನದಲ್ಲಿ ಮಾತುಕತೆಯನ್ನು ನಡೆಸಲಿದ್ದಾರೆ. ಇದೇ ಸಮಯದಲ್ಲಿ ಬುಶ್ ಪತ್ನಿ ಹಾಗೂ ಒಬಾಮರ ಪತ್ನಿ ಖಾಸಗಿ ನಿವಾಸದಲ್ಲಿ ಭೇಟಿಯಾಗಲಿದ್ದು ಒಬಾಮರ ಮಕ್ಕಳು ಈ ವೇಳೆಯಲ್ಲಿರಲು ಸಾಧ್ಯತೆಯಿಲ್ಲ ಮತ್ತು ಮಾತುಕತೆಯನ್ನು ಎದುರು ನೋಡುತ್ತಿದ್ದೇವೆ ಎಂದು ಪೆರಿನೊ ತಿಳಿಸಿದರು.
ಜನವರಿ 20ರಂದು ಅಧಿಕಾರ ಸ್ವೀಕರಿಸುವ ಮೊದಲೇ ಒಬಾಮರಿಗೆ ಶ್ವೇತಭವನದೊಂದಿಗೆ ಆರ್ಥಿಕ ಬಿಕ್ಕಟ್ಟು ಮತ್ತು ಇರಾಕ್ ಸಮಸ್ಯೆಯ ಬಗ್ಗೆ ಆಡಳಿತ ವರ್ಗದವರು ಪೂರ್ವ ಮಾಹಿತಿ ನೀಡಲಿದ್ದಾರೆಂದು ಮತ್ತು ಈ ಎರಡು ಪ್ರಧಾನ ವಿಷಯಗಳನ್ನು ಚರ್ಚಿಸಲು ಕಾತರದಿಂದ ಇದ್ದೆನೆಂದು ಬುಶ್ ತಿಳಿಸಿದ್ದಾರೆ. |