ಅಫ್ಘಾನಿಸ್ತಾನದ ಗಡಿಭಾಗದ ಬುಡಕಟ್ಟು ಪ್ರದೇಶದಲ್ಲಿ ಶುಕ್ರವಾರ ಅಮೆರಿಕದ ಶಂಕಿತ ಮಿಸೈಲ್ ದಾಳಿಯಲ್ಲಿ ಅಲ್ ಕೈದಾ ಉಗ್ರಗಾಮಿ ಸಂಘಟನೆ ಬೆಂಬಲಿತ ಹತ್ತು ಮಂದಿ ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಜಿರಿಸ್ತಾನದಲ್ಲಿ ಇರುವ ಹಲವಾರು ಅಲ್ ಕೈದಾ ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸಿದ್ದು, ಪ್ರಾಥಮಿಕ ವರದಿಯಂತೆ ಈ ಘಟನೆಯಲ್ಲಿ ಹತ್ತು ಮಂದಿ ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ ಮಿಸೈಲ್ ದಾಳಿಯಲ್ಲಿ ಹತ್ತು ಮಂದಿ ಸಾವನ್ನಪ್ಪಿರುವುದನ್ನು ಗುಪ್ತಚರ ಇಲಾಖೆಯ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.
ಇತ್ತೀಚೆಗೆ ಅಫ್ಘಾನಿಸ್ತಾನದ ಗಡಿಭಾಗದಲ್ಲಿರುವ ಶಂಕಿತ ಅಲ್ ಕೈದಾ ಹಾಗೂ ತಾಲಿಬಾನ್ ಉಗ್ರರ ನೆಲೆಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಈ ದಾಳಿ ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧ ಹದಗೆಡುವ ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೇ ಪಾಕಿಸ್ತಾನದ ಗಡಿಭಾಗದಲ್ಲಿ ಅಮೆರಿಕ ಸೈನ್ಯ ಕಾರ್ಯಾಚರಣೆ ನಡೆಸುವುದನ್ನು ಪಾಕ್ ಪ್ರಧಾನಿ ಗಿಲಾನಿ ಹಾಗೂ ಅಧ್ಯಕ್ಷ ಜರ್ದಾರಿ ಅವರು ತೀವ್ರವಾಗಿ ಖಂಡಿಸಿದ್ದರು. |