ಹೈಟಿ ರಾಜಧಾನಿಯ ಹೊರವಲಯದ ಪಟ್ಟಣವೊಂದರಲ್ಲಿ ಶಿಥಿಲಾವಸ್ಥೆಯಲ್ಲಿರುವ ಚರ್ಚ್ ಶಾಲೆ ಶುಕ್ರವಾರ ಕುಸಿದು ಬಿದ್ದ ಪರಿಣಾಮ ಕನಿಷ್ಠ 50 ಮಂದಿ ಜೀವಂತ ಸಮಾಧಿಯಾಗಿದ್ದು, ಇವರಲ್ಲಿ ಹೆಚ್ಚಿನವರು ಶಾಲಾ ಮಕ್ಕಳಾಗಿದ್ದರೆಂದು ರಕ್ಷಣಾ ಕಾರ್ಯಕರ್ತರು ತಿಳಿಸಿದರು.
ತರಗತಿ ನಡೆಯುತ್ತಿದ್ದ ವೇಳೆಯಲ್ಲಿ ಲಾ ಪ್ರಾಮಿಸ್ ಶಾಲಾ ಕಟ್ಟಡವು ಕುಸಿದು ಬಿದ್ದಿದೆ. ಪೋರ್ಟ್-ಆ-ಪ್ರಿನ್ಸ್‌ನಲ್ಲಿ ನಡೆದ ಈ ದುರಂತದಿಂದಾಗಿ ನಿರೆಟ್ಟಿಸ್ ಸಮುದಾಯದ ಮನೆಗಳ ಮೇಲೂ ಅವಶೇಷಗಳು ಕುಸಿದು ಬಿದ್ದು, ಗಾಯಾಳುಗಳ ಸಂಖ್ಯೆಯೂ ಹೆಚ್ಚಿತು ಎಂದು ಸ್ಛಳೀಯ ನಾಗರಿಕ ರಕ್ಷಣಾ ಅಧಿಕಾರಿಯಾದ ನಾಡಿಯಾ ಬ್ಲಚಾರ್ಡ್ ಹೈಟಿ ರೇಡಿಯೋ ವಾಹಿನಿಗೆ ತಿಳಿಸಿದರು.
ಅನಾಹುತದಲ್ಲಿ 50 ಮಂದಿ ಸಾವಿಗೀಡಾಗಿದ್ದು, 124 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆಯೆಂದು ಅವರು ತಿಳಿಸಿದರು.
ಮಕ್ಕಳನ್ನು ಕಳಕೊಂಡ ಹೆತ್ತವರ ಆಕ್ರಂದನವು ಮುಗಿಲು ಮುಟ್ಟುತ್ತಿದ್ದು, ಭಗ್ನಾವಶೇಷಗಳೆಡೆಯಲ್ಲಿ ತಮ್ಮ ಮಕ್ಕಳಿಗಾಗಿ ಶೋಧವನ್ನು ನಡೆಸುತ್ತಿದ್ದಾರೆ. ವಿಶ್ವಸಂಸ್ಥೆ ಶಾಂತಿಪಾಲಕರು, ಸಾವಿಗೀಡಾದ ಮಕ್ಕಳ ಸಂಬಂಧಿಕರು ಹಾಗೂ ರಕ್ಷಣಾದಳದವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಬ್ಲಚಾರ್ಡ್ ತಿಳಿಸಿದರು. |