ವಿಶ್ವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ಸಲುವಾಗಿ ಚರ್ಚೆಗೆ ಮುಂದಿನ ವಾರದಿಂದ ವಾಷಿಂಗ್ಟನ್‌ನಲ್ಲಿ ಆರಂಭವಾಗಲಿರುವ ಜಿ-20 ರಾಷ್ಟ್ರಗಳ ನಾಯಕರ ಶೃಂಗಸಭೆಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಹಾಜರಿರುವುದಿಲ್ಲ.
ಮುಂಬರುವ ಜಿ-20 ರಾಷ್ಟ್ರಗಳ ನಾಯಕರ ಶೃಂಗಸಭೆಗೆ ಒಬಾಮ ಲಭ್ಯರಿರುವುದಿಲ್ಲವೆಂದು ಅವರ ವಕ್ತಾರೆ ಸ್ಟಿಫಾನಿ ಕಟ್ಟರ್ ಶುಕ್ರವಾರ ದೃಢೀಕರಿಸಿದರು.
"ಅವರೇ ಹೇಳಿರುವಂತೆ ಜಿ-20 ಶೃಂಗಸಭೆಗೆ ಅಮೆರಿಕದಿಂದ ಒಬ್ಬರೇ ಅಧ್ಯಕ್ಷರು ಇರಬೇಕು" ಎಂದು ಶಿಕಾಗೋದಲ್ಲಿ ಒಬಾಮರ ಪ್ರಥಮ ಸುದ್ದಿಗೋಷ್ಠಿಯ ನಂತರ ಅವರು ಹೇಳಿದರು. ಜಿ-20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಶ್ ಪಾಲ್ಗೊಳ್ಳಲಿದ್ದಾರೆ.
ಈ ಮೊದಲು, ನವೆಂಬರ್ 15ರಿಂದ ಆರಂಭವಾಗಲಿರುವ ಜಿ-20 ಶೃಂಗಸಭೆಯಲ್ಲಿ ಒಬಾಮರನ್ನು ನಿರೀಕ್ಷಿಸುವಂತಿಲ್ಲವೆಂದು ಶ್ವೇತಭವನದ ವಕ್ತಾರರು ಹೇಳಿಕೆ ನೀಡಿದ್ದರು. |