ಸಾವಿಗೆ ಕಾರಣವಾಗುವ ಸೈಬರ್ ಭಯೋತ್ಪಾದನೆಗೆ ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ ವಿಧಿಸುವುದರ ಬಗ್ಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಅಧ್ಯಾದೇಶದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಹೈ-ಟೆಕ್ ಅಪರಾಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರೂಪುಗೊಂಡಿರುವ ಎಲೆಕ್ಟ್ರಾನಿಕ್ ಅಪರಾಧ ತಡೆ ಅಧ್ಯಾದೇಶವು, ಕಂಪ್ಯೂಟರ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ದೇಶದ ಭದ್ರತೆಗೆ ಕುತ್ತು ತರುವ ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿದೆ.
ಎಲೆಕ್ಟ್ರಾನಿಕ್ ವಂಚನೆ, ಡೇಟಾ ಕಳವು/ಹಾನಿ ಮತ್ತು ಅಕ್ರಮವಾಗಿ ಮಾಹಿತಿ ಪಡೆಯುವುದೇ ಮುಂತಾದ ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ಈ ಅಧ್ಯಾದೇಶವನ್ನು ಪ್ರಸ್ತಾಪಿಸಲಾಗಿದ್ದು, ಇದು ಅನುಷ್ಠಾನಗೊಳ್ಳುವ ಮೊದಲು ಸಂಸತ್ತಿನ ಅಂಗೀಕಾರ ದೊರೆಯಬೇಕಿದೆ.
ಸೈಬರ್ ಅಪರಾಧ ನಡೆಸಿ ಯಾವನೇ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗುವ ಯಾವುದೇ ವ್ಯಕ್ತಿಗಳು ಮರಣ ದಂಡನೆ ಇಲ್ಲವೇ ಜೀವಾವಧಿ ಸಜೆ ಮತ್ತು ದಂಡ ಶಿಕ್ಷೆಗೆ ಅರ್ಹ ಎನ್ನುತ್ತದೆ ಈ ಪ್ರಸ್ತಾಪಿತ ಅಧ್ಯಾದೇಶ. |