ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಬರಾಕ್ ಒಬಾಮ ಅವರು ವಿಶ್ವದ ಇತರ ರಾಷ್ಟ್ರಗಳ ಮುಖಂಡರಿಗೆ ಕರೆ ಮಾಡಿದ್ದರೂ, ಭಾರತದ ಪ್ರಧಾನ ಮಂತ್ರಿಗೇಕೆ ಕರೆ ಮಾಡಿಲ್ಲ ಎಂಬ ವಿಷಯಕ್ಕೆ ರೆಕ್ಕೆಪುಕ್ಕ ಹುಟ್ಟಿಕೊಳ್ಳುತ್ತಿರುವಂತೆಯೇ, ಇದಕ್ಕೆ ಹಲವು ಕಾರಣಗಳಿದ್ದು, ಒಬಾಮ ಅವರು ಮುಂದಿನ ವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ವಿತ್ತೀಯ ಸಮಾವೇಶದಲ್ಲಿ ನೇರವಾಗಿಯೇ ಭೇಟಿಯಾಗುವುದೂ ಒಂದು ಕಾರಣವಾಗಿರಬಹುದು ಎಂದು ಡೆಮಾಕ್ರಟ್ ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್, ಜಪಾನ್, ಪೋಲಂಡ್ ಮಾತ್ರವಲ್ಲದೆ ಪಾಕಿಸ್ತಾನವೇ ಮೊದಲಾದ ರಾಷ್ಟ್ರಗಳ ಮುಖಂಡರಿಗೆ ಒಬಾಮ ಅವರು ಕರೆ ಮಾಡಿದ್ದರೂ, ಭಾರತಕ್ಕೆ ಕರೆ ಮಾಡದಿರುವುದು ಚರ್ಚೆಯ ವಿಷಯವಾಗಿತ್ತು. ಪಾಕಿಸ್ತಾನದಲ್ಲಿನ ಸಮಸ್ಯೆಯೂ ಸೇರಿದಂತೆ, ಒಬಾಮ ಅವರ ವಿದೇಶಾಂಗ ನೀತಿಯ ಆದ್ಯತಾ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಈ ಕರೆಗಳನ್ನು ಮಾಡಲಾಗಿತ್ತು ಎಂಬುದು ಅಧಿಕಾರಿಗಳು ನೀಡುವ ಸ್ಪಷ್ಟನೆ.
ಮತ್ತೊಂದು ವಾದದ ಪ್ರಕಾರ, ಮನಮೋಹನ್ ಅವರೇ ಒಬಾಮಗೆ ಕರೆ ಮಾಡಿ ಅಭಿನಂದನೆ ತಿಳಿಸಿದ ಸಂದರ್ಭದಲ್ಲೇ ಅವರಿಬ್ಬರ ನಡುವೆ ಸಂಭಾಷಣೆ ನಡೆದಿದ್ದಿರಬಹುದು. ಹೀಗಾಗಿ ಪುನಃ ಕರೆ ಮಾಡುವ ಅವಶ್ಯಕತೆಯಿರಲಿಲ್ಲ ಎಂದೂ ಡೆಮಾಕ್ರಟ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರೇ ಒಬಾಮಗೆ ಕರೆ ಮಾಡಿ ಅಭಿನಂದಿಸಿದ್ದರೇ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ ಎಂದಿದ್ದಾರವರು.
ಆದರೆ, ಮನಮೋಹನ್ ಸಿಂಗ್‌ಗೇಕೆ ಒಬಾಮ ಕರೆ ಮಾಡಿಲ್ಲ ಎಂಬ ಪ್ರಶ್ನೆಗೆ ಡೆಮಾಕ್ರಟ್ ಪಕ್ಷದ ವಿದೇಶಾಂಗ ವ್ಯವಹಾರಗಳ ಉನ್ನತ ಸಲಹೆಗಾರರಲ್ಲೊಬ್ಬರು ಹಾಗೂ ಒಬಾಮ ಆಡಳಿತದಲ್ಲಿ ದಕ್ಷಿಣ ಏಷ್ಯಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಹುದ್ದೆ ಅಲಂಕರಿಸುವ ನಿರೀಕ್ಷೆ ಇರುವನ ಹಿರಿಯ ಅಧಿಕಾರಿಯೊಬ್ಬರು ತಬ್ಬಿಬ್ಬಾಗಿದ್ದಾರೆ.
ಸಾಮಾನ್ಯವಾಗಿ ವಿದೇಶೀ ನಾಯಕರೇ ಕರೆ ಮಾಡಿ ಶುಭ ಹಾರೈಸುವುದು ಪದ್ಧತಿ ಎಂದು ಅವರು ಹೇಳುತ್ತಾರೆ. 'ಇದಕ್ಕೆ ವಿರುದ್ಧವಾಗಿರುವ ಪದ್ಧತಿ ಇಲ್ಲ. ಅಂದರೆ ನಿಯೋಜಿತ ಅಧ್ಯಕ್ಷರೇ ವಿದೇಶೀ ನಾಯಕರಿಗೆ ಕರೆ ಮಾಡಿ 'ನೋಡಿ, ನಾನು ವಾಷಿಂಗ್ಟನ್‌ನಲ್ಲಿರುವ ನಿಮ್ಮ ವ್ಯಕ್ತಿ' ಎಂದು ಹೇಳುವ ಪದ್ಧತಿಯೇ ಇಲ್ಲ' ಎಂದವರು ಸ್ಪಷ್ಟಪಡಿಸಿದ್ದಾರೆ. |