2002ರಲ್ಲಿ 202 ಮಂದಿಯ ಸಾವಿಗೆ ಕಾರಣವಾದ ಭೀಕರ ಬಾಲಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇಂಡೋನೇಷ್ಯಾದ ಮೂವರು ಇಸ್ಲಾಮಿಕ್ ಉಗ್ರಗಾಮಿಗಳಿಗೆ ಭಾನುವಾರ ಗುಂಡಿಕ್ಕುವ ಮೂಲಕ ಮರಣದಂಡನೆ ವಿಧಿಸಲಾಯಿತು. ಇದರೊಂದಿಗೆ, ಶಿಕ್ಷೆಗೆ ಗುರಿಯಾದ ಉಗ್ರರ ಬೆಂಬಲಿಗರು ಪ್ರತೀಕಾರಕ್ಕಾಗಿ ಕರೆ ನೀಡಿದ್ದಾರೆ.
ಆರೋಪಿಗಳಾದ ಅಮ್ರೋಜಿ, ಮುಕ್ಲಸ್ ಮತ್ತು ಇಮಾಮ್ ಸಮುದ್ರರನ್ನು ನಸುಕಿನ ವೇಳೆ ಬಂದೂಕು ದಳದಿಂದ ಮರಣದಂಡನೆಗೆ ಗುರಿಪಡಿಸಲಾಯಿತೆಂದು ಅಟಾರ್ನಿ ಜನರಲ್ ಅವರ ವಕ್ತಾರರಾದ ಜಾಸ್ಮನ್ ಪಂಜೈತನ್ ತಿಳಿಸಿದರು. ಶವಪರೀಕ್ಷೆಯ ನಂತರ ಮರಣವನ್ನು ದೃಢೀಕರಿಸಲಾಯಿತೆಂದು ಅವರು ಹೇಳಿದರು.
ಅಮ್ರೋಜಿ (47), ಸಹೋದರನಾದ ಮುಕ್ಲಸ್ (48) ಮತ್ತು ಗುಂಪಿನ ನಾಯಕನಾದ ಇಮಾಮ್ ಸಮುದ್ರ (38)ರನ್ನು ಸೆರೆಮನೆವಾಸದಲ್ಲಿರಿಸಿದ ದಕ್ಷಿಣ ಜಾವಾದ ನೂಸಕಂಬಂಗನ್ ದ್ವೀಪದಲ್ಲಿ ಎದೆಗೆ ಗುಂಡಿಕ್ಕಿ ಶಿಕ್ಷೆಯನ್ನು ಕಾರ್ಯಗತಗೊಳಿಸಲಾಯಿತೆಂದು ಸ್ಥಳೀಯ ಟಿ.ವಿ ಮೂಧ್ಯಮವೊಂದು ವರದಿ ಮಾಡಿವೆ.
ಪೂರ್ವ ಜಾವಾದ ತೆಂಗುಲನ್ ಗ್ರಾಮಕ್ಕೆ ಹೆಲಿಕಾಪ್ಟರ್‌ನ ಮೂಲಕ ಮುಕ್ಲಸ್ ಮತ್ತು ಅಮ್ರೋಜಿಯ ಮೃತದೇಹವನ್ನು ತಂದ ವೇಳೆಗೆ ಸುಮಾರು 100ರಷ್ಟಿದ್ದ ಈ ಉಗ್ರರ ಬೆಂಬಲಿಗರು ಪೊಲೀಸರೊಂದಿಗೆ ಸಂಘರ್ಷದಲ್ಲಿ ತೊಡಗಿದರು.
2002ರಲ್ಲಿ ಬಾಲಿ ದ್ವೀಪದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 88 ಆಸ್ಟ್ರೇಲಿಯನ್ನರು ಸೇರಿದಂತೆ 160 ಮಂದಿ ವಿದೇಶೀಯರು ಹಾಗೂ 38 ಮಂದಿ ಇಂಡೋನೇಷ್ಯನ್ನರು ಸಾವನ್ನಪ್ಪಿದ್ದರು.
ಮರಣ ದಂಡನೆ ವಿಧಿಸುವ ಕೊನೆಯ ಕ್ಷಣದವರೆಗೂ ಆರೋಪಿಗಳು ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಮತ್ತು ಇಸ್ಲಾಮಿಕ್ ದೇಶದ ತಮ್ಮ ಕನಸು ಈಡೇರುವುದಕ್ಕೆ 'ಹುತಾತ್ಮ'ರಾಗಲು ಬಯಸುವುದಾಗಿ ಹೇಳಿದ್ದರು. |