ಇರಾಕ್‌ನ ಹಲವೆಡೆಗಳಲ್ಲಿ ಭಾನುವಾರ ಸಂಭವಿಸಿದ ಬಾಂಬ್ ದಾಳಿಗಳಲ್ಲಿ ಕನಿಷ್ಠ ಎಂಟು ಮಂದಿ ಬಲಿಯಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಈ ಮಧ್ಯೆ, ಇರಾಕ್‌ನ ಅಸ್ಥಿರ ಪರಿಸ್ಥಿತಿಗೆ ಅಮೆರಿಕ ಸೇನಾಪಡೆಗಳೇ ಕಾರಣ ಎಂದು ದೂರಿರುವ ಸಿರಿಯಾ ಅಧ್ಯಕ್ಷರು, ಸೈನ್ಯವು ದೇಶ ತೊರೆಯುವಂತೆ ಆಗ್ರಹಿಸಿದರು.
ಮಸೂಲ್ ಪಟ್ಟಣದ ಇರಾಕಿ ಸೇನಾ ಪಹರೆ ದಳದ ಮೇಲೆ ಸಂಜೆ ನಡೆಸಿದ ದಾಳಿಯಲ್ಲಿ ರಸ್ತೆ ಬದಿಯಲ್ಲಿರಿಸಿದ ಬಾಂಬ್ ಸ್ಫೋಟಗೊಂಡು ಮೂವರು ಸೈನಿಕರು ಹತರಾಗಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಇರಾಕಿನೆಲ್ಲೆಡೆ ಅಲ್‌ಖೈದಾ ಉಗ್ರರು ಹಾಗೂ ಮಸೂಲ್‌ನಲ್ಲಿರುವ ಸುನ್ನಿ ದಂಗೆಕೋರರ ನಿರ್ನಾಮಕ್ಕೆ ಅಮೆರಿಕ ಮತ್ತು ಇರಾಕ್ ಸೇನಾಪಡೆಗಳು ಕಳೆದ ಹಲವು ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿವೆ.
ಬಾಗ್ದಾದ್‌ನಿಂದ 80 ಕೀ.ಮೀ ದೂರದ ಖಾಲಿಸ್ ಪ್ರದೇಶದ ಸಣ್ಣ ಹೋಟೆಲ್‌ವೊಂದರ ಹೊರಗಡೆ ಬೈಕ್‌ನಲ್ಲಿ ಬಾಂಬ್ ಸ್ಫೋಟಗೊಂಡು ಮೇಯರ್ ಸಹಿತ ಎರಡು ಮಂದಿ ಬಲಿಯಾಗಿದ್ದು 13 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸ್ ವಿಭಾಗ ತಿಳಿಸಿದೆ.
ಅನ್ಬರ್ ಪ್ರಾಂತ್ಯದಲ್ಲಿ ಮಹಿಳಾ ಆತ್ಮಹತ್ಯಾ ಬಾಂಬರ್ ಒಬ್ಬಳು ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮವಾಗಿ ಒಬ್ಬ ಬಾಲಕಿ, ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿ, ಐದು ಮಂದಿ ಗಾಯಗೊಂಡಿದ್ದಾರೆ. |