ವೈಮನಸ್ಯ ತೊರೆದು ತಮಿಳು ವ್ಯಾಘ್ರರು (ಎಲ್ಟಿಟಿಇ) ನೀಡಿರುವ ಸಂಧಾನ ಕರೆಯನ್ನು 'ಸಂಚು' ಎಂದು ಕರೆದಿರುವ ಶ್ರೀಲಂಕಾ ಸರಕಾರ, ತಮಿಳು ಉಗ್ರಗಾಮಿಗಳನ್ನು ನಿಶ್ಶಸ್ತ್ರೀಕರಣಗೊಳಿಸಿದ ಬಳಿಕವಷ್ಟೇ ಯಾವುದೇ ಸಂಧಾನ ಮಾತುಕತೆ ನಡೆಯುವುದು ಸಾಧ್ಯ ಎಂದು ಸ್ಪಷ್ಟಪಡಿಸಿದೆ.
ದ್ವೀಪ ರಾಷ್ಟ್ರದ ಜನತೆ ಎಲ್ಟಿಟಿಇಯ ಕದನ ವಿರಾಮ ಕುರಿತಾದ ಇಬ್ಬಗೆಯ ನೀತಿ ಬಗ್ಗೆ ಸಾಕಷ್ಟು ಅನುಭವ ಪಡೆದಿದ್ದಾರೆ ಎಂದು ಶ್ರೀಲಂಕಾದ ರಕ್ಷಣಾ ವಕ್ತಾರ, ಸಚಿವ ಕೆಹೆಲಿಯಾ ರಾಂಬುಕ್ವೆಲ್ಲಾ ಹೇಳಿರುವುದಾಗಿ ಡೈಲಿ ಮಿರರ್ ವರದಿ ಮಾಡಿದೆ.
ಎಲ್ಟಿಟಿಇ ಶಸ್ತ್ರಾಸ್ತ್ರ ಕೆಳಗಿರಿಸಿ ಭಯೋತ್ಪಾದನೆ ನಿಲ್ಲಿಸಿದ ಬಳಿಕವಷ್ಟೇ ಯಾವುದೇ ಕದನ ವಿರಾಮ ಸಾಧ್ಯ. ಎಲ್ಟಿಟಿಇಯ ಬಲೆಗೆ ಬೀಳುವ ಮೂಲಕ ನಮ್ಮ ದೇಶದ ಜನರ ಕೈಬಿಡಲು ಮಹೇಂದ್ರ ರಾಜಪಕ್ಷೆ ಸರಕಾರ ಸಿದ್ಧವಿಲ್ಲ ಎಂದು ಎಲ್ಟಿಟಿಇಯ ಸಂಧಾನ ಕರೆಗೆ ಪ್ರತಿಕ್ರಿಯಿಸುತ್ತಾ ರಾಂಬುಕ್ವೆಲ್ಲಾ ತಿಳಿಸಿದರು.
ಎಲ್ಟಿಟಿಇ ರಕ್ಷಣಾ ಕಾರ್ಯದರ್ಶಿ ಗೋತಭಯ ರಾಜಪಕ್ಷಾ ಮತ್ತು ಸೇನಾ ಕಮಾಂಡರ್ ಶರತ್ ಫೋನ್ಸೆಕಾ ಅವರ ಹತ್ಯೆಗೆ ಪ್ರಯತ್ನಿಸಿದ ಬಳಿಕ ಮತ್ತು ಭಾರೀ ಸಂಖ್ಯೆಯಲ್ಲಿ ನಾಗರಿಕರು ಹಾಗೂ ಸೇನಾ ಸಿಬ್ಬಂದಿಯನ್ನು ಹತ್ಯೆಗೈದ ನಂತರ ಅದರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಯಿತು ಎಂದು ಸಚಿವರು ತಿಳಿಸಿದರು.
ಕದನ ವಿರಾಮ ಬಗ್ಗೆ ಎಲ್ಟಿಟಿಇ ನಿಲುವನ್ನು ಸ್ಪಷ್ಟಪಡಿಸುವಂತೆ ತಮಿಳುನಾಡು ಮುಖಂಡರು ಸ್ಪಷ್ಟನೆ ಕೋರಿದ ಹಿನ್ನೆಲೆಯಲ್ಲಿ, ತಾವು ಶ್ರೀಲಂಕಾ ಸರಕಾರದೊಂದಿಗೆ ವೈಮನಸ್ಯ ತೊರೆದು ಸಂಧಾನಕ್ಕೆ ಸಿದ್ಧವಿರುವುದಾಗಿ ಬಂಡುಕೋರ ಬಣದ ರಾಜಕೀಯ ಘಟಕದ ಮುಖ್ಯಸ್ಥ ಬಿ.ನಟೇಶನ್ ಹೇಳಿರುವುದಾಗಿ ತಮಿಳು ಪರವಾಗಿರುವ ತಮಿಳ್‌ನೆಟ್ ವೆಬ್‌ಸೈಟಿನಲ್ಲಿ ಪ್ರಕಟವಾಗಿತ್ತು. |