ಭಾರತದಲ್ಲಿ ಶಿಕ್ಷೆ ಪೂರ್ತಿಗೊಳಿಸಿದ 30 ಪಾಕಿಸ್ತಾನಿ ಪ್ರಜೆಗಳನ್ನು ನವೆಂಬರ್ 14ರಂದು ವಾಘಾ ಗಡಿ ಪ್ರದೇಶದಲ್ಲಿ ಭಾರತವು ಪಾಕಿಸ್ತಾನಕ್ಕೆ ಹಸ್ತಾಂತರಿಸಲಿದೆ.
ಸಜೆ ಪೂರ್ಣಗೊಳಿಸಿದ ಮತ್ತು ರಾಷ್ಟ್ರೀಯತೆ ದೃಢೀಕರಣವಾದ ಜೈಲುವಾಸಿಗಳನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಇತ್ತೀಚೆಗೆ ಭಾರತ-ಪಾಕ್ ಸೆರೆಯಾಳುಗಳ ನ್ಯಾಯಾಂಗ ಸಮಿತಿಯು ಶಿಫಾರಸು ಮಾಡಿತ್ತು.
ಇದರಂತೆ ಭಾರತ ಸರಕಾರವು ವಿವಿಧ ಪ್ರಕರಣಗಳಲ್ಲಿ ಸೆರೆವಾಸದಲ್ಲಿರಿಸಿದ 30 ಪಾಕಿಸ್ತಾನಿ ಪೌರತ್ವ ಹೊಂದಿದ ಪ್ರಜೆಗಳನ್ನು ವಾಘಾ ಗಡಿ ಪ್ರದೇಶದಲ್ಲಿ ಪಾಕ್ ಅಧಿಕಾರಿಗಳಿಗೆ ಹಸ್ತಾಂತರಿಸಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರತ-ಪಾಕ್ ಸೆರೆಯಾಳುಗಳ ನ್ಯಾಯಾಂಗ ಸಮಿತಿಯು ಎರಡೂ ರಾಷ್ಟ್ರಗಳ ಜೈಲುಗಳಿಗೆ ಭೇಟಿ ನೀಡಿ ಶಿಕ್ಷೆಯನ್ನು ಪೂರ್ತಿಗೊಳಿಸಿದ ಕೈದಿಗಳ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿತ್ತು.
ಸುಮಾರು 370 ಪಾಕಿಸ್ತಾನಿ ಕೈದಿಗಳನ್ನು ಸೆರೆಯಲ್ಲಿದ್ದಾರೆ ಎಂದು ಭಾರತವು ಪಾಕಿಸ್ತಾನಕ್ಕೆ ತಿಳಿಸಿತ್ತು. ಆದರೆ 600ಕ್ಕಿಂತ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಭಾರತದ ಸೆರೆಮನೆಗಳಲ್ಲಿದ್ದಾರೆ, ಇವರಲ್ಲಿ 150 ಮಂದಿಯ ಶಿಕ್ಷೆಯ ಅವಧಿ ಪೂರ್ತಿಗೊಂಡಿದೆಯೆಂದು ಪಾಕಿಸ್ತಾನಿ ಅಧಿಕಾರಿಗಳು ವಾದಿಸಿದ್ದರು. |