ಅಮೆರಿಕದ ಶ್ವೇತ ಭವನದಲ್ಲಿ ಬರಾಕ್ ಒಬಾಮ ನೇತೃತ್ವದಲ್ಲಿ ಹೊಸ ಸರಕಾರವು ಜನವರಿ 20ರಂದು ಅಧಿಕಾರವೇರಲಿದ್ದು, ಪಾಕಿಸ್ತಾನದೊಂದಿಗಿನ ಅಮೆರಿಕದ ಧೋರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ಕರಾಚಿಯಲ್ಲಿರುವ ಅಮೆರಿಕ ರಾಯಭಾರಿ ಕೇ ಎಲ್. ಅನ್‌ಸ್ಕೆ ಹೇಳಿದ್ದಾರೆ.
ಕರಾಚಿಯಲ್ಲಿ ಜಮಾತ್-ಇ-ಇಸ್ಲಾಮಿ ನಾಯಕರೊಂದಿಗಿನ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅನ್‌ಸ್ಕೆ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಜಾಸತ್ತೆಯ ಭಾಗವಾಗಿದ್ದು ಮತ್ತು ಪ್ರಜಾಪ್ರಭುತ್ವ ಸರಕಾರದಲ್ಲಿನ ಬದಲಾವಣೆಯು ಪಾಕಿಸ್ತಾನದೊಂದಿಗಿನ ಅಮೆರಿಕ ಧೋರಣೆಯಲ್ಲಿ ಬದಲಾವಣೆಯನ್ನುಂಟು ಮಾಡಬೇಕಿಲ್ಲವೆಂದು ತಿಳಿಸಿದರು.
ಅಮೆರಿಕ ಮತ್ತು ಪಾಕಿಸ್ತಾನದ ಸಂಬಂಧವು ಕಳೆದ 60 ವರ್ಷಗಳಿಂದ ಉತ್ತಮ ರೀತಿಯಲ್ಲಿದ್ದು, ಭವಿಷ್ಯದಲ್ಲಿ ಈ ಸಂಬಂಧವು ಇನ್ನೂ ಹೆಚ್ಚು ಬಲಗೊಳ್ಳಲಿದೆ ಎಂಬ ಅನ್‌ಸ್ಕೆಯವರ ಹೇಳಿಕೆಯನ್ನು ಡೈಲಿ ಟೈಮ್ಸ್ ವರದಿ ಮಾಡಿದೆ.
ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಪಾಕಿಸ್ತಾನದಲ್ಲಾಗುತ್ತಿರುವ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳುವ ಪ್ರಯತ್ನವಾಗಿ ಅಮೆರಿಕ ಆಡಳಿತವು ಅಲ್ಲಿನ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಆಕೆ ಹೇಳಿದರು. |