ರಾಜಕೀಯ ಮಾಜಿ ಕೈದಿ ಮೊಹಮ್ಮದ್ ನಾಶೀದ್(41ವ.) ಅವರು ಮಾಲ್ಡೀವ್ಸ್‌ನ ನೂತನ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಕಳೆದ ಮೂರು ದಶಕಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಮೌಮೂನ್ ಅಬ್ದುಲ್ ಗಯೂಮ್ ಅವರು ಈ ಬಾರಿಯ ಅಧ್ಯಕ್ಷ ಚುನಾವಣೆಯಲ್ಲಿ ರಾಜಕೀಯ ಮಾಜಿ ಕೈದಿ ನಾಶೀದ್ ವಿರುದ್ಧ ಪರಾಜಯಗೊಂಡಿದ್ದರು. ಆ ನಿಟ್ಟಿನಲ್ಲಿ ದೀರ್ಘಾವಧಿಯವರೆಗೆ ಅಧ್ಯಕ್ಷ ಪಟ್ಟ ಅಲಂಕರಿಸಿದ್ದ ಗಯೂಮ್ ಅವರ ಪಟ್ಟಾಭಿಷೇಕಕ್ಕೆ ತಡೆಯೊಡ್ಡಿದ್ದಾರೆ.
ಮಾಲ್ಡೀವ್ಸ್‌ನ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಾಶೀದ್, ದೇಶದ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಕಾಪಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಾಶೀದ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ಮತ್ತು ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಜರಿದ್ದರು.
ಆದರೆ ಇಂದು ನಡೆದ ನೂತನ ಅಧ್ಯಕ್ಷರ ಪದ ಸ್ವೀಕಾರ ಸಮಾರಂಭಕ್ಕೆ ಮಾಜಿ ಅಧ್ಯಕ್ಷ ಗಯೂಮ್ ಅವರು ಗೈರು ಹಾಜರಾಗಿದ್ದರು. |